ಪಾರ್ಟಿಗೇಟ್ ಹಗರಣ ಜಾನ್ಸನ್ ಸಂಸತ್ತಿನ ದಾರಿ ತಪ್ಪಿಸಿರಬಹುದು: ಸಮಿತಿ ವರದಿ

ಲಂಡನ್, ಮಾ.3: ಪಾರ್ಟಿಗೇಟ್ ಪ್ರಕರಣದಲ್ಲಿ ಬ್ರಿಟನ್ ನ ಆಗಿನ ಪ್ರಧಾನಿ ಬೋರಿಸ್ ಜಾನ್ಸನ್ ಸಂಸತ್ತಿನ ದಾರಿ ತಪ್ಪಿಸಿರುವ ಸಾಧ್ಯತೆಯಿದೆ ಎಂದು ಈ ಹಗರಣದ ಕುರಿತು ಪರಿಶೀಲನೆ ನಡೆಸುತ್ತಿರುವ ಬ್ರಿಟನ್ ಸಂಸತ್ತಿನ ಸಮಿತಿ ಶುಕ್ರವಾರ ವರದಿ ಮಾಡಿದೆ.
ಕೋವಿಡ್ ಲಾಕ್ಡೌನ್ ನ ಸಂದರ್ಭ ಜಾರಿಯಲ್ಲಿದ್ದ ನಿಯಮವನ್ನು ಮೀರಿ ಪ್ರಧಾನಿಯವರ ಕಚೇರಿಯಲ್ಲಿ ಆಡಳಿತದ ಪಕ್ಷದ ಸಂಸದರು ಪಾರ್ಟಿ(ಔತಣಕೂಟ) ನಡೆಸಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದ ಬೋರಿಸ್ ಜಾನ್ಸನ್, ಕೋವಿಡ್ ನಿಯಮವನ್ನು ಮೀರಿ ಯಾವುದೇ ಕಾರ್ಯಕ್ರಮ ನಡೆದಿಲ್ಲ ಎಂದು ಸಂಸದರನ್ನು ಸಮರ್ಥಿಸಿಕೊಂಡಿದ್ದರು. ಅಲ್ಲದೆ ಸಂಸತ್ತಿನಲ್ಲೂ ಇದೇ ಹೇಳಿಕೆ ನೀಡಿದ್ದರು.
ನಿಯಮ ಮೀರಿರುವುದು ವೀಡಿಯೊ ದಾಖಲೆಯಲ್ಲಿ ಸ್ಪಷ್ಟವಾಗಿದ್ದರೂ ಅದನ್ನು ಸಮರ್ಥಿಸಿಕೊಳ್ಳುವ ಮೂಲಕ ಪ್ರಧಾನಿ ಜಾನ್ಸನ್ ಸಂಸತ್ತಿನ ದಾರಿ ತಪ್ಪಿಸಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿಪಕ್ಷ ಮುಖಂಡ ಕಿಯರ್ ಸ್ಟಾರ್ಮರ್ 2022ರ ಎಪ್ರಿಲ್ ನಲ್ಲಿ ಸಂಸತ್ತಿನಲ್ಲಿ ನಿರ್ಣಯ ಮಂಡಿಸಿದ್ದರು.
ಜಾನ್ಸನ್ ಸಂಸತ್ತಿನ ದಾರಿ ತಪ್ಪಿಸಿದ್ದಾರೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದ ಸಂಸತ್ತಿನ ಸವಲತ್ತು ಸಮಿತಿಯು, ಜಾನ್ಸನ್ ಸಂಸತ್ತಿನ ದಾರಿ ತಪ್ಪಿಸಿರುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದೆ.