ಇದು ನನ್ನ ರಾಜಕೀಯ ಜೀವನದ ಕೊನೆಯ ಚುನಾವಣೆ: ವಿನಯಕುಮಾರ್ ಸೊರಕೆ

ಉದ್ಯಾವರ, ಮಾ.4: "ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಜನಸೇವೆ ಮಾಡಿದ್ದೇನೆ. ಅಧಿಕಾರ ಇದ್ದ ಅಥವಾ ಅಧಿಕಾರ ಇಲ್ಲದ ಸಮಯದಲ್ಲೂ ಜನರೊಂದಿಗೆ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಅಧಿಕಾರ ಇದ್ದಂಥ ಸಮಯದಲ್ಲಿ ಜನರ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕೆಲಸವನ್ನು ಮಾಡಿದ್ದೇನೆ. ಪ್ರಸಕ್ತ ಚುನಾವಣೆ ನಾನು ಎದುರಿಸುತ್ತಿರುವ ನನ್ನ ರಾಜಕೀಯ ಜೀವನದ ಕೊನೆಯ ಚುನಾವಣೆಯಾಗಲಿದೆ" ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.
ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಪ್ರಮುಖರ ಸಭೆಯಲ್ಲಿ ಅವರು ಭಾವನಾತ್ಮಕವಾಗಿ ಮಾತನಾಡಿದರು.
"ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಾದರೂ, ಜನರು ಮತ್ತು ಕಾರ್ಯಕರ್ತರು ನನ್ನನ್ನು ಯಾವತ್ತೂ ಕೈ ಬಿಡಲಿಲ್ಲ. ಕ್ಷೇತ್ರದ ಮತದಾರರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ನನ್ನ ಮೇಲೆ ಇಟ್ಟ ನಂಬಿಕೆಗೆ ಯಾವುದೇ ಚ್ಯುತಿ ಬಾರದಂತೆ ಕೆಲಸ ಮಾಡಿದ್ದೇನೆ. ಪ್ರಸಕ್ತ ನಾನು ಮಾಜಿ ಶಾಸಕನಾದರೂ ಪ್ರತಿದಿನ ಎಂಬಂತೆ ಜನರು ನನ್ನ ಸಂಪರ್ಕದಲ್ಲಿದ್ದು, ಅವರ ಸಮಸ್ಯೆಗಳನ್ನು ನನ್ನ ಬಳಿ ತಿಳಿಸುತ್ತಿದ್ದಾರೆ ಮತ್ತು ಅದಕ್ಕೆ ನಾನು ಸ್ಪಂದಿಸುತ್ತಿದ್ದೇನೆ" ಎಂದು ನುಡಿದರು.
"ನನ್ನ ಅಧಿಕಾರದ ಸಮಯದಲ್ಲಿ ವಿವಿಧ ದೇವಸ್ಥಾನ, ಚರ್ಚ್, ಮಸೀದಿಗಳಿಗೆ ಸರಕಾರದಿಂದ ದೊರಕುವ ಅನುದಾನ ಮತ್ತು ನನ್ನ ವೈಯುಕ್ತಿಕ ಸಹಾಯವನ್ನು ಮಾಡಿದ್ದೇನೆ. ಈ ವಿಚಾರವಾಗಿ ಯಾವುದೇ ಸಂದರ್ಭದಲ್ಲಿ ನಾನು ರಾಜಕೀಯ ಮಾಡಿಲ್ಲ. ನನ್ನ ಅವಧಿಯಲ್ಲಿ ಆದ ಯೋಜನೆಗಳನ್ನು ಪ್ರಸಕ್ತ ಬಿಜೆಪಿ ಶಾಸಕರು ಉದ್ಘಾಟನೆ ಮಾಡುತ್ತಿದ್ದಾರೆ. ಅದೇ ಅವರ ಸಾಧನೆ" ಎಂದು ಸೊರಕೆ ಲೇವಡಿ ಮಾಡಿದರು.
"ರಾಜ್ಯದ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಸ್ಪಷ್ಟವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯು ನನ್ನ ರಾಜಕೀಯ ಜೀವನದ ಕೊನೆಯ ಚುನಾವಣೆ. ಕಪ್ಪು ಚುಕ್ಕೆ ಇಲ್ಲದ ನನ್ನ ರಾಜಕೀಯ ಜೀವನದ ಈ ಚುನಾವಣೆಗೆ ಮತದಾರರು ಆಶೀರ್ವದಿಸುತ್ತಾರೆ ಎಂಬ ಸಂಪೂರ್ಣ ನಂಬಿಕೆ ನನ್ನಲ್ಲಿದೆ" ಎಂದು ವಿನಯ ಕುಮಾರ್ ಸೊರಕೆ ತಿಳಿಸಿದರು.







