ತಮಿಳುನಾಡಿನಲ್ಲಿ ಬಿಹಾರದ ವಲಸೆ ಕಾರ್ಮಿಕರ ಹತ್ಯೆ ಮಾಡಲಾಗಿದೆ ಎಂದು ಟ್ವೀಟ್ ಮಾಡಿದ್ದ ಬಿಜೆಪಿ ನಾಯಕನ ವಿರುದ್ಧ ಪ್ರಕರಣ

ಹೊಸದಿಲ್ಲಿ: ತಮಿಳುನಾಡಿನಲ್ಲಿ ಬಿಹಾರದ ವಲಸೆ ಕಾರ್ಮಿಕರ ಹತ್ಯೆ ನಡೆಸಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳನ್ನು ಹರಡಿದ ಉತ್ತರ ಪ್ರದೇಶದ ಬಿಜೆಪಿ ನಾಯಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದಿನಪತ್ರಿಕೆಯ ಸಂಪಾದಕ ಹಾಗೂ ಸ್ಥಳೀಯ ದಿನಪತ್ರಿಕೆಯ ಮಾಲೀಕರನ್ನು ತಮಿಳುನಾಡು ಪ್ರತ್ಯೇಕವಾಗಿ ಹೆಸರಿಸಿದೆ ಹಾಗೂ ಅವರನ್ನು ಬಂಧಿಸಲು ಪೊಲೀಸ್ ತಂಡವನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿರುವ ಬಿಜೆಪಿಯ ಉತ್ತರ ಪ್ರದೇಶ ಘಟಕದ ವಕ್ತಾರರಾದ ಪ್ರಶಾಂತ್ ಉಮ್ರಾವ್ ಅವರು “ಹಿಂದಿಯಲ್ಲಿ ಮಾತನಾಡಿದ್ದಕ್ಕೆ ಬಿಹಾರದ 12 ವಲಸಿಗ ಕಾರ್ಮಿಕರನ್ನು ನೇಣು ಬಿಗಿದು ಕೊಲ್ಲಲಾಯಿತು " ಎಂದು ಟ್ವೀಟಿಸಿದ್ದರು.
ವಲಸಿಗರ ಮೇಲಿನ ದಾಳಿಗಳ ಹೊರತಾಗಿಯೂ ಬಿಹಾರದ ನಾಯಕ ತೇಜಸ್ವಿ ಯಾದವ್ ಅವರು ಸ್ಟಾಲಿನ್ ಅವರ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗವಹಿಸಿದ್ದರು ಎಂದು ಉಮ್ರಾವ್ ಹೇಳಿದ್ದರು.
ಅಂದಿನಿಂದ ಟ್ವೀಟ್ ಅನ್ನು ಅಳಿಸಲಾಗಿದೆ.
ಪ್ರದೇಶ ಹಾಗೂ ಭಾಷೆಯ ಆಧಾರದ ಮೇಲೆ ಜನರ ನಡುವೆ ದ್ವೇಷವನ್ನು ಸೃಷ್ಟಿಸಿದ ಆರೋಪದ ಮೇಲೆ ತಮಿಳುನಾಡು ಪೊಲೀಸರು ಪ್ರಶಾಂತ್ ಉಮ್ರಾವ್ ವಿರುದ್ಧ ಆರೋಪ ಹೊರಿಸಿದ್ದಾರೆ. ದ್ವೇಷವನ್ನು ಹರಡಲು ಮತ್ತು ಗಲಭೆಗಳನ್ನು ಪ್ರಚೋದಿಸಿದ್ದಕ್ಕಾಗಿ 'ದೈನಿಕ್ ಭಾಸ್ಕರ್' ಸಂಪಾದಕ ಹಾಗೂ 'ತನ್ವಿರ್ ಪೋಸ್ಟ್' ಮಾಲೀಕರ ವಿರುದ್ಧ ಪ್ರಕರಣವನ್ನು ದಾಖಲಿಸಿದೆ.







