ಮನೀಶ್ ಸಿಸೋಡಿಯಾ ಸಿಬಿಐ ಕಸ್ಟಡಿ ಸೋಮವಾರದ ತನಕ ವಿಸ್ತರಣೆ; ಮಾರ್ಚ್ 10 ರಂದು ಜಾಮೀನು ವಿಚಾರಣೆ

ಹೊಸದಿಲ್ಲಿ: ದಿಲ್ಲಿ ಮದ್ಯ ನೀತಿ ಜಾರಿ ಹಗರಣಕ್ಕೆ ಸಂಬಂಧಿಸಿ ಸಿಬಿಐ ವಶದಲ್ಲಿರುವ ಹಾಗೂ ತನಿಖೆಗೆ ಒಳಗಾಗಿರುವ ಆಮ್ ಆದ್ಮಿ ಪಕ್ಷದ ನಾಯಕ ದಿಲ್ಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಸಿಬಿಐ ಕಸ್ಟಡಿ ಅವಧಿಯನ್ನು ಸಿಬಿಐ ನ್ಯಾಯಾಲಯವು ಸೋಮವಾರದ ತನಕ ವಿಸ್ತರಿಸಿದೆ.
ಸಿಸೋಡಿಯಾ ತನಿಖೆಗೆ ಸಹಕರಿಸುತ್ತಿಲ್ಲ ಹೀಗಾಗಿ ಇನ್ನಷ್ಟು ದಿನ ಅವರನ್ನು ಕಸ್ಟಡಿಗೆ ನೀಡಬೇಕೆಂದು ಸಿಬಿಐ ಶನಿವಾರ ನ್ಯಾಯಾಲಯವನ್ನು ಕೋರಿದೆ.
ಇದೇ ವೇಳೆ ಜಾಮೀನಿಗಾಗಿ ಮನವಿ ಮಾಡಿರುವ ಮನೀಷ್ ಸಿಸೋಡಿಯಾ ತನ್ನನ್ನು ಕಸ್ಟಡಿಯಲ್ಲಿ ಇಟ್ಟುಕೊಳ್ಳುವುದರಿಂದ "ಯಾವುದೇ ಫಲಪ್ರದ ಉದ್ದೇಶವನ್ನು ಪೂರೈಸುವುದಿಲ್ಲ" ಏಕೆಂದರೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಎಲ್ಲವನ್ನು ವಶಫಡಿಸಿಕೊಳ್ಳಲಾಗಿದೆ ಎಂದರು.
ಇದೇ ವೇಳೆ ನ್ಯಾಯಾಲಯವು ಸಿಸೋಡಿಯಾ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಮಾರ್ಚ್ 10ಕ್ಕೆ ನಡೆಸುವುದಾಗಿ ಹೇಳಿದೆ.
ಸಿಸೋಡಿಯಾ ಅವರು ರಾಷ್ಟ್ರ ರಾಜಧಾನಿಗೆ ಮದ್ಯದ ನೀತಿಯನ್ನು ರೂಪಿಸುವ ವಿಚಾರದಲ್ಲಿ ಭ್ರಷ್ಟಾಚಾರದ ಆರೋಪವನ್ನು ಎದುರಿಸುತ್ತಿದ್ದಾರೆ, ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ದೂರು ನೀಡಿದ ನಂತರ ಮದ್ಯ ನೀತಿಯನ್ನು ರದ್ದುಗೊಳಿಸಲಾಯಿತು.
2021-22ಕ್ಕೆ ಈಗ ರದ್ದಾದ ಮದ್ಯ ನೀತಿಯ ರಚನೆ ಹಾಗೂ ಅನುಷ್ಠಾನದಲ್ಲಿನ ಭ್ರಷ್ಟಾಚಾರದ ಆರೋಪದ ಮೇಲೆ 51 ವರ್ಷದ ಸಿಸೋಡಿಯಾರನ್ನು ರವಿವಾರ ಸಂಜೆ ಸಿಬಿಐ ಬಂಧಿಸಿದೆ.







