ಸಂಚಾರ ದಟ್ಟಣೆ: ಹಂಪನಕಟ್ಟೆ ಜಂಕ್ಷನ್‌ನಲ್ಲಿ ಪ್ರಾಯೋಗಿಕ ಬದಲಾವಣೆ

ಮಂಗಳೂರು, ಮಾ.4: ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವ ಸಲುವಾಗಿ ನಗರದ ಹಂಪನಕಟ್ಟೆ ಜಂಕ್ಷನ್ ನಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತಾಲಯವು ಪ್ರಕಟನೆಯಲ್ಲಿ ತಿಳಿಸಿದೆ.
*ಕ್ಲಾಕ್ ಟವರ್ ಕಡೆಯಿಂದ ಪಳ್ನೀರ್ ರಸ್ತೆ (ಮದರ್ ತೆರೆಸಾ) ಕಡೆಗೆ ಹೋಗುವ ಎಲ್ಲಾ ವಾಹನಗಳು ಹಂಪನಕಟ್ಟೆ ಸರ್ಕಲ್‌ನಲ್ಲಿ ನೇರವಾಗಿ ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆಯಲ್ಲಿ ಚಲಿಸಿ ಜೋಸ್ ಅಲುಕಾಸ್ ಎದುರು ‘ಯು’ ಟರ್ನ್ ಪಡೆದು ವಾಪಸ್ ಹಂಪನಕಟ್ಟೆ ಜಂಕ್ಷನ್‌ಗೆ ಬಂದು ಎಡಕ್ಕೆ ತಿರುಗಿ ಪಳ್ನೀರ್ ರಸ್ತೆ ಕಡೆಗೆ ಸಂಚರಿಸಬಹುದಾಗಿದೆ.
*ಪಳ್ನೀರ್ ರಸ್ತೆ ಕಡೆಯಿಂದ ನವಭಾರತ್ ಸರ್ಕಲ್ ಕಡೆಗೆ ಹೋಗುವ ವಾಹನಗಳು ಹಂಪನಕಟ್ಟೆ ಸರ್ಕಲ್‌ನಲ್ಲಿ ಎಡಕ್ಕೆ ತಿರುಗಿ (ಫ್ರೀ ಲೆಫ್ಟ್) ಕ್ಲಾಕ್ ಟವರ್ ಕಡೆಗೆ ಚಲಿಸಿ ಕ್ಲಾಕ್ ಟವರ್ ಜಂಕ್ಷನ್‌ನಲ್ಲಿ ‘ಯು’ ಟರ್ನ್ ಪಡೆದು ಹಂಪನಕಟ್ಟೆ ಜಂಕ್ಷನ್‌ಗೆ ಬಂದು ಎಡಕ್ಕೆ ತಿರುಗಿ ನವಭಾರತ್ ಸರ್ಕಲ್ ಕಡೆಗೆ ಸಂಚರಿಸಬಹುದಾಗಿದೆ.
*ನವಭಾರತ್ ಸರ್ಕಲ್ ಕಡೆಯಿಂದ ಕ್ಲಾಕ್ ಟವರ್ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಪಂಜೆ ಮಂಗೇಶ್ವರ ರಾವ್ (ಪಿಎಂ ರಾವ್ ರೋಡ್) ರಸ್ತೆಯ ಮೂಲಕ ಚಲಿಸಿ ಗಣಪತಿ ಹೈಸ್ಕೂಲ್ ರಸ್ತೆ ಮೂಲಕ ಕೃಷ್ಣಭವನ ಜಂಕ್ಷನ್ (ಕೆಬಿ ಕಟ್ಟೆ) ತಲುಪಿ ಅಲ್ಲಿಂದ ಕ್ಲಾಕ್ ಟವರ್ ಕಡೆಗೆ ಸಂಚರಿಸಬಹುದಾಗಿದೆ.
*ನವಭಾರತ್ ಸರ್ಕಲ್ ಕಡೆಯಿಂದ ಪಳ್ನೀರ್ ರಸ್ತೆ ಕಡೆಗೆ ಹೋಗುವ ವಾಹನಗಳು ಹಂಪನಕಟ್ಟೆ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆದು ಮುಲ್ಕಿ ಸುಂದರರಾಮ್ ಶೆಟ್ಟಿ ರಸ್ತೆಯಲ್ಲಿ ಚಲಿಸಿ ಜೋಸ್ ಅಲುಕ್ಕಾಸ್ ಎದುರು ‘ಯು’ ಟರ್ನ್ ಪಡೆದು ಹಂಪನಕಟ್ಟೆ ಜಂಕ್ಷನ್‌ಗೆ ಬಂದು ಎಡಕ್ಕೆ ತಿರುಗಿ ಪಳ್ನೀರ್ ರಸ್ತೆ ಹಾಗೂ ನೇರವಾಗಿ ಕ್ಲಾಕ್ ಟವರ್ ಕಡೆಗೆ ಸಂಚರಿಸಬಹುದಾಗಿದೆ.
ಸಾರ್ವಜನಿಕರಿಗೆ ವಿಶೇಷ ಸೂಚನೆ
*ಹಂಪನಕಟ್ಟೆ ಜಂಕ್ಷನ್‌ನಲ್ಲಿ ಪಾದಚಾರಿಗಳ ಸುರಕ್ಷಿತಾ ಸಂಚಾರಕ್ಕೆ ಪಾದಚಾರಿಗಳ ಮಾರ್ಗ (ಝೀಬ್ರಾ ಕ್ರಾಸ್)ವನ್ನು ಗುರುತಿಸಲಾಗಿದ್ದು, ಪಾದಚಾರಿಗಳು ಕಡ್ಡಾಯವಾಗಿ ಈ ಮಾರ್ಗಗಳನ್ನು ಬಳಸಬೇಕಿದೆ.
*ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣ ಹಾಗೂ ಸರ್ವಿಸ್ ಬಸ್ ನಿಲ್ದಾಣದಿಂದ ಹೊರಡುವ ಬಸ್‌ಗಳಿಗೆ ಕೆಬಿ ಕಟ್ಟೆ ನಿಲ್ದಾಣದ ನಂತರ ಜೋಸ್ ಅಲುಕಾಸ್ ಎದುರಿನ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಬಸ್‌ಗಳನ್ನು ಹತ್ತಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಈ ಬಸ್ ನಿಲ್ದಾಣಗಳನ್ನು ಹೊರತುಪಡಿಸಿ ಹಂಪನಕಟ್ಟೆಯ ಬಳಿ ಬಸ್ಸನ್ನು ಹತ್ತಲು ನಿಲ್ಲದೆ ಕೆಬಿ ಕಟ್ಟೆ ಅಥವಾ ಜೋಸ್ ಅಲುಕಾಸ್ ಬಸ್ ನಿಲ್ದಾಣಗಳನ್ನು ಮಾತ್ರ ಉಪಯೋಗಿಸಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.