ತಂತ್ರಜ್ಞಾನದ ಮೂಲಕ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ದಾಟಿಸಿ: ಪೂರ್ಣಿಮಾ
ಮೂರನೇ ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಪೇತ್ರಿ (ಬ್ರಹ್ಮಾವರ), ಮಾ.4: ನಮ್ಮ ಗ್ರಾಮೀಣ ಪ್ರದೇಶದ ಜನರಿಂದಾಗಿ ನಮ್ಮ ಕನ್ನಡ ನಾಡು ನುಡಿ ಸಂಸ್ಕೃತಿ ಇನ್ನೂ ಉಳಿದಿದೆ. ತಂತ್ರಜ್ಞಾನದ ಸಮರ್ಪಕ ಬಳಕೆಯೊಂದಿಗೆ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯ ಜ್ಞಾನವನ್ನು ನೀಡಬೇಕಾಗಿದೆ ಎಂದು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹೇಳಿದ್ದಾರೆ.
ಪೇತ್ರಿಯ ಚೇರ್ಕಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದಿ. ಚಂದ್ರಶೇಖರ ಕೆದ್ಲಾಯ ವೇದಿಕೆಯಲ್ಲಿ ಶನಿವಾರ ಪೇತ್ರಿಯ ಸಮೃದ್ಧಿ ಮಹಿಳಾ ಮಂಡಳಿಯ ಸಹಕಾರದೊಂದಿಗೆ ನಡೆದ ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ೩ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ‘ಒರೆಗಲ್ಲು’ನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಾಹಿತ್ಯ ಜನರ ಬದುಕಿನ ಪ್ರತಿಬಿಂಬವಾಗಿದೆ. ಉಡುಪಿ ಜಿಲ್ಲೆಯಲ್ಲಿ ಕ.ಸಾ.ಪದಿಂದ ಸಾಕಷ್ಟು ಕನ್ನಡ ಸಾಹಿತ್ಯಿಕ ಕೆಲಸಗಳು ಆಗಿದ್ದು, ಇದು ಇತರರಿಗೆ ಪ್ರೇರಣೆಯಾಗಲಿ ಎಂದವರು ಹಾರೈಸಿದರು.
‘ಸಮೃದ್ಧಿ’ ಕವನಗುಚ್ಛವನ್ನು ಬಿಡುಗಡೆಗೊಳಿಸಿ ಮಾತನಾಡಿದ ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂರ್ತಿ, ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕ್ರಿಯಾಶೀಲವಾಗಿರುವುದು ಹೆಮ್ಮೆಯ ವಿಷಯ. ಸಾಹಿತ್ಯ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಮುಂದಿನ ಪೀಳಿಗೆಗೆ ಜಾತಿಯನ್ನು ಆಸ್ತಿಯನ್ನಾಗಿ ಮಾಡದೇ ಅವರಲ್ಲಿ ಓದುವ ಪ್ರವೃತ್ತಿಯನ್ನು ಬೆಳೆಸಿ ಸಾಹಿತ್ಯಾಸಕ್ತಿಯನ್ನು ಮೂಡಿಸುವ ಕಾರ್ಯವಾಗಬೇಕು ಎಂದರು.
ಹಿರಿಯ ಸಾಂಸ್ಕೃತಿಕ ಚಿಂತಕ, ಸಂಶೋಧಕ, ಇತಿಹಾಸಜ್ಞ ಡಾ.ಬಿ.ಜಗದೀಶ ಶೆಟ್ಟಿ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಕ.ಸಾ.ಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿ ಆಡಿದರು. ದ.ಕ. ಹಾಲು ಒಕ್ಕೂಟದ ನಿರ್ದೇಶಕ ಕಮಲಾಕ್ಷ ಹೆಬ್ಬಾರ್ ಪುಸ್ತಕ ಪ್ರದರ್ಶನ ಉದ್ಘಾಟಿಸಿದರು.
ಕನ್ನಾರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧನಂಜಯ ಅಮೀನ್, ಶಾಲೆಯ ಮುಖ್ಯಶಿಕ್ಷಕಿ ಶೀಲಾ, ಕರ್ಜೆಯ ಉದ್ಯಮಿ ರವಿ ಕ್ರಮಧಾರಿ, ಸಮೃದ್ಧಿ ಮಹಿಳಾ ಮಂಡಳಿಯ ಅಧ್ಯಕ್ಷೆ ಪ್ರಸನ್ನಾ ಪ್ರಸಾದ್ ಭಟ್, ಚೇರ್ಕಾಡಿ ಗ್ರಾಪಂನ ಮಾಜಿ ಅಧ್ಯಕ್ಷ ಹರೀಶ ಶೆಟ್ಟಿ, ಕಸಾಪ ಗೌರವಾಧ್ಯಕ್ಷ ನರೇಂದ್ರಕುಮಾರ ಕೋಟ, ಕಾಫು ಘಟಕದ ಅಧ್ಯಕ್ಷ ಪುಂಡಲೀಕ ಮರಾಠೆ, ಕಾರ್ಕಳದ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಬೈಂದೂರಿನ ಡಾ.ರಘು ನಾಯ್ಕ, ಬ್ರಹ್ಮಾವರ ಕಸಾಪ ಮಾಜಿ ಅಧ್ಯಕ್ಷ ನಾರಾಯಣ ಮಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಸಾಪ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಪಿ.ವಿ.ಆನಂದ್ ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿದರು. ಬ್ರಹ್ಮಾವರ ಘಟಕದ ಅಧ್ಯಕ್ಷ ರಾಮಚಂದ್ರ ಐತಾಳ ಸ್ವಾಗತಿಸಿದರು. ಎಂ.ಫಕೀರಪ್ಪ ವಂದಿಸಿದರು. ಅಲ್ತಾರು ನಾಗರಾಜ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮುನ್ನ ಚೇರ್ಕಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಎಸ್ ಭಟ್ ರಾಷ್ಟ್ರಧ್ವಜಾರೋಹಣ ಮಾಡಿದ್ದರು.
ಶಿಕ್ಷಣ ವ್ಯವಸ್ಥೆಯಲ್ಲಾದ ಬದಲಾವಣೆಯಿಂದ ಮೌಲ್ಯ, ಮಾನವೀಯತೆ ಮಾಯ-
ಇಂದು ಜನರ ಸಂಸ್ಕೃತಿ, ಧೋರಣೆ, ನೀತಿ ಎಲ್ಲವೂ ಆರ್ಥಿಕ ಹಿನ್ನೆಲೆಯ ನೀತಿಗಳ ಪ್ರಭಾವಕ್ಕೊಳಗಾಗಿದೆ. ಮೌಲ್ಯಗಳು, ಮಾನವೀಯತೆ ಜೀವನದಲ್ಲಿ ಮಾಯವಾಗಿದೆ. ಇದಕ್ಕೆ ಮುಖ್ಯ ಕಾರಣ ಶಿಕ್ಷಣ ವ್ಯವಸ್ಥೆಯ ಮೂಲಭೂತ ಬದಲಾವಣೆ ಎಂದು ಬ್ರಹ್ಮಾವರ ತಾಲೂಕು ೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಇತಿಹಾಸ ಸಂಶೋಧಕ ಡಾ.ಬಿ.ಜಗದೀಶ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.
ಶಿಕ್ಷಣ ಇಂದು ಮಾರಾಟದ ಸರಕಾಗಿದೆ. ಕನ್ನಡವನ್ನು ಸರಕಾರ ಮರೆತಿರುವುದು ದುರದೃಷ್ಟಕರ. ಪಠ್ಯದಲ್ಲಿ ನಮ್ಮ ನಾಡು, ನುಡಿ, ಸಾಹಿತ್ಯ, ಚರಿತ್ರೆಗೆ ಹೆಚ್ಚು ಒತ್ತು ನೀಡಬೇಕು. ಕನ್ನಡದ ಕೃತಿಗಳು ಬೇರೆ ಭಾಷೆಗಳಿಗೆ ಭಾಷಾಂತರವಾಗಬೇಕು. ಕನ್ನಡ ಜನಪದ ಹಾಡುಗಳ ಅಧ್ಯಯನ, ಅವುಗಳ ಸಂರಕ್ಷಣೆ ಆಗಬೇಕು ಎಂದವರು ಅಧ್ಯಕ್ಷೀಯ ಭಾಷಣದಲ್ಲಿ ನುಡಿದರು.
"ಇಲ್ಲೇ ಸಮೀಪದ ಇತಿಹಾಸ ಪ್ರಸಿದ್ಧ ಬಾರಕೂರನ್ನು ಪಾರಂಪರಿಕ ನಗರವಾಗಿ ಪರಿಗಣಿಸಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಪರಿಚಯಿಸುವ ಪ್ರಯತ್ನವಾಗಬೇಕು. ಕುಂದಗನ್ನಡ ಅಧ್ಯಯನ ಪೀಠವಾಗಬೇಕು. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕದ ಅನುಷ್ಟಾನ ಪ್ರಾಮಾಣಿಕವಾಗಿ ನಡೆಯಬೇಕು. ಕನ್ನಡವನ್ನು ಕಾಟಾಚಾರಕ್ಕೆ ಬಳಸದೇ ಹೃದಯದ ಭಾವನೆ ಗಳನ್ನು ಅಭಿವ್ಯಕ್ತಗೊಳಿಸುವ ಮಾಧ್ಯಮವಾಗಲಿ".
-ಡಾ.ಬಿ.ಜಗದೀಶ್ ಶೆಟ್ಟಿ, ಸಮ್ಮೇಳನಾಧ್ಯಕ್ಷರು ಬ್ರಹ್ಮಾವರ ತಾಲೂಕು ಕಸಾಪ ಸಮ್ಮೇಳನ ಪೇತ್ರಿ.

