ಮಣಿಪಾಲ: ಮಾ.5ರಂದು ಮತ್ತೊಂದು ಸಾಹಸಕ್ಕೆ ಸಿದ್ಧರಾದ ಜ್ಯೋತಿರಾಜ್
30 ಮಹಡಿಗಳ ‘ರಾಯಲ್ ಎಂಬೆಸಿ’ ಏರುವ ಪ್ರಯತ್ನ

ಉಡುಪಿ, ಮಾ.4: ಎರಡು ದಿನಗಳ ಹಿಂದಷ್ಟೇ ನಗರದ ಬ್ರಹ್ಮಗಿರಿಯಲ್ಲಿ ರುವ 25 ಅಂತಸ್ತಿನ ವುಡ್ಸ್‌ವಿಲ್ ವಸತಿ ಸಮುಚ್ಛಯವನ್ನು ಬರಿಗೈಯಲ್ಲಿ ಏರಿ ಸಾಹಸ ಮೆರೆದ ಚಿತ್ರದುರ್ಗದ ಸಾಹಸಿ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್, ರವಿವಾರ ಮಣಿಪಾಲದಲ್ಲಿ ಇನ್ನೂ ಕಷ್ಟಕರ ಸಾಹಸ ವೊಂದಕ್ಕೆ ಮುಂದಾಗಿದ್ದಾರೆ.
ಮಣಿಪಾಲದ ಪ್ರತಿಷ್ಠಿತ 30 ಮಹಡಿಗಳ ವಸತಿ ಸಮುಚ್ಛಯ ‘ರಾಯಲ್ ಎಂಬೆಸಿ’ಯನ್ನು ಬರಿಗೈಲಿ ಏರುವ ಸಾಹಸ ಮಾಡಲಿರುವುದಾಗಿ ಕೋತಿರಾಜ್ ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಈ ಸಮುಚ್ಛಯದ ಮಾಲಕರಾದ ಮಾಜಿ ಸಚಿವ ಪ್ರಮೋದ್ ಮದ್ವರಾಜ್, ಗಣ್ಯರು ಹಾಗೂ ವಸತಿ ಸಮುಚ್ಛಯದ ನಿವಾಸಿಗಳ ಉಪಸ್ಥಿತಿಯಲ್ಲಿ ರವಿವಾರ 11 ಗಂಟೆಗೆ ಈ ಸಾಹಸಕ್ಕೆ ಮುಂದಾಗುವುದಾಗಿ ಅವರು ತಿಳಿಸಿದರು.
ಮಣಿಪಾಲದ ಪ್ರತಿಷ್ಠಿತ ವಸತಿ ಸಮುಚ್ಛಯವಾದ ರಾಯಲ್ ಎಂಬೆಸಿಯ ಕಿಟಿಕಿಗಳ ನಡುವಿನ ಅಂತರ ಹೆಚ್ಚಿದ್ದರೂ, ಕಠಿಣವಾದ ಈ ಸಾಹಸವನ್ನು ಯಶಸ್ವಿಯಾಗಿ ಮುಗಿಸುವ ವಿಶ್ವಾಸ ತಮಗಿರುವುದಾಗಿ ಅವರು ತಿಳಿಸಿದರು.
ನಿಧಿ ಸಂಗ್ರಹಕ್ಕಾಗಿ ಈ ಸಾಹಸ: ತಾನಿರುವ ಚಿತ್ರದುರ್ಗದಲ್ಲಿ ಕನಿಷ್ಠ ಅರ್ಧ ಎಕರೆಯಾದರೂ ಜಾಗ ಪಡೆದು ಅಲ್ಲಿ 50 ಅಡಿ ಎತ್ತರ ಕೃತಕ ಗೋಡೆ ನಿರ್ಮಿಸಿ, ಸಾಹಸಿ ಪ್ರವೃತ್ತಿಯವರಿಗೆ ಬರಿಗೈಲಿ ಬಂಡೆ ಹಾಗೂ ಕಟ್ಟಡ ಏರುವ ತರಬೇತಿ ನೀಡುವ ಉದ್ದೇಶವಿದೆ. ಇದರೊಂದಿಗೆ ತನ್ನನ್ನೇ ನಂಬಿ ತನ್ನೊಂದಿರುವ 13 ಮಂದಿ ಮಕ್ಕಳಿಗೆ ತರಬೇತಿಯೊಂದಿಗೆ, ಜೀವನಕ್ಕೊಂದು ದಾರಿ ತೋರಿಸುವ ಗುರುತರ ಹೊಣೆಗಾರಿಕೆ ತನ್ನ ಮೇಲಿದ್ದು, ಇದಕ್ಕಾಗಿ ಕನಿಷ್ಠ ಎರಡು ಕೋಟಿ ರೂ.ನಿಧಿ ಸಂಗ್ರಹಿಸುವ ಗುರಿಯನ್ನು ಹಾಕಿಕೊಂಡಿದ್ದೇನೆ.
ಈಗ ತನ್ನ ಕೈಯಲ್ಲಿರುವುದು ಕೇವಲ 75,000ರೂ. ಮಾತ್ರ. ಉಳಿದ ನಿಧಿಯ ಸಂಗ್ರಹಕ್ಕಾಗಿ ದಾನಿಗಳ ನೆರವಿನೊಂದಿಗೆ ಇಂಥ ಸಾಹಸಕ್ಕೆ ಕೈಹಾಕಿ ರುವುದಾಗಿ ಅವರು ಹೇಳಿಕೊಂಡರು.
ಸರಕಾರದಿಂದ ಈವರೆಗೆ ಯಾವುದೇ ನೆರವು ನನಗೆ ಸಿಕ್ಕಿಲ್ಲ. ಹಿಂದೆ ಸಚಿವ ರಾಗಿದ್ದ ಹರತಾಳ ಹಾಲಪ್ಪ ನೆರವಿನ ಭರವಸೆ ನೀಡಿದರಾದರೂ, ಕೆಲವೇ ದಿನಗಳಲ್ಲಿ ಅವರ ಸಚಿವ ಪದವಿಯೇ ಹೋಯಿತು. ಮುಂದೆ ಪ್ರಮೋದ್ ಮಧ್ವರಾಜ್ ಚಿತ್ರದುರ್ಗಕ್ಕೆ 5 ಕೋಟಿ ಘೋಷಿಸಿದರಾದರೂ, ಅದು ಬೆಂಗಳೂರಿನಿಂದ ಆಚೆಗೆ ಬರಲೇ ಇಲ್ಲ ಎಂದು ಕೋತಿರಾಜ್ ಬೇಸರದಿಂದ ನುಡಿದರು.
ಇದೀಗ ತನ್ನ ಕನಸು ನನಸು ಮಾಡಲು ಜನರ ಆಶೀರ್ವಾದವನ್ನೇ ನಂಬಿದ್ದೇನೆ. ಜನರು ಬಂದು ನನಗೆ ಸಹಾಯ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ. ಹೀಗಾಗಿ ದೊಡ್ಡ ದೊಡ್ಡ ಬಿಲ್ಡಿಂಗ್‌ನ್ನು ಬರಿಗೈಲಿ ಹತ್ತಿ ಜನರಿಂದ ಹಣ ಸಂಗ್ರಹಿಸಲು ನಿರ್ಧರಿಸಿದ್ದೇನೆ. ಇದಕ್ಕಾಗಿ ನಾನು ಅತಿಯಾಗಿ ನಂಬುವ ಧರ್ಮಸ್ಥಳದ ಮಂಜುನಾಥನ ಆಶೀರ್ವಾದ ಪಡೆದಿದ್ದೇನೆ ಎಂದರು.
ರೇಷನ್ ಕಾರ್ಡ್ ಹಾಗೂ ಐಡಿ ಕಾರ್ಡ್ ಬಿಟ್ಟರೆ ನನ್ನ ಹೆಸರಿನಲ್ಲಿ ಏನೂ ಇಲ್ಲ. ಚಿತ್ರದುರ್ಗದಲ್ಲಿ ನನ್ನ ಯೋಜನೆಗೆ ಸರಕಾರ ಒಂದು ಎಕರೆ ಜಾಗ ನೀಡಿದರೆ ಕೃತಜ್ಞನಾಗಿರುತ್ತೇನೆ. ನಾನು ಈಗಾಗಲೇ 17 ಬಾರಿ ಜೋಗ ಜಲಪಾತವನ್ನು ಹತ್ತಿದ್ದೇನೆ. ಅದೇ ರೀತಿ ಮಧುಗಿರಿ ಬೆಟ್ಟ, ಟಿಪ್ಪು ಡ್ರಾಪ್‌ನ್ನು ಬರಿಗೈಲಿ ಹತ್ತಿದ್ದೇನೆ. ಈ ನಡುವೆ 28 ಸಲ ಮೂಳೆ ಮುರಿದುಕೊಂಡು 11 ಬಾರಿ ಶಸ್ತ್ರಚಿಕಿತ್ಸೆಗೊಳಗಾಗಿದ್ದೇನೆ ಎಂದರು.
ತಮಿಳುನಾಡಿನ ಅನಾಥ ನಾನು: ನನಗೀಗ 35 ವರ್ಷ ಪ್ರಾಯ. ತಮಿಳು ನಾಡಿನ ಮೂಲದ ನಾನು ಹೆತ್ತವರೊಂದಿಗೆ ಜಾತ್ರೆಗೆ ಹೋಗಿದ್ದಾಗ ಕಳೆದು ಹೋದವನು. ಅಲ್ಲಿಂದ ನಾನು ಸೇರಿದ್ದು ಚಿತ್ರದುರ್ಗವನ್ನು. ಇದೀಗ ಅದೇ ನನಗೆ ಮನೆ. ಕನ್ನಡವೇ ನನ್ನ ಉಸಿರು. ಕೊನೆಯವರೆಗೆ ನಾನು ಕನ್ನಡಿಗನಾ ಗಿಯೇ ಇರುತ್ತೇನೆ. ಬಹಳ ವರ್ಷಗಳ ಬಳಿಕ ಹೆತ್ತವರು ಸಿಕ್ಕಿದರೂ ನಾನು ಅಲ್ಲಿಗೆ ಹೋಗಲಾರೆ. ಕನ್ನಡಿಗನಾಗಿರುವುದೇ ನನಗೆ ಹೆಮ್ಮೆ ಎಂದು ಕೋತಿರಾಜ್ ಎಂದೇ ಪರಿಚಿತರಾಗಿರುವ ಜ್ಯೋತಿರಾಜ್ ತಿಳಿಸಿದರು.
ಉಡುಪಿಯ ಬಳಿಕ ಮಂಗಳೂರಿಗೆ ತೆರಳಿ ಅಲ್ಲೂ ಇದೇ ಸಾಹಸವನ್ನು ಮುಂದುವರಿಸುತ್ತೇನೆ ಎಂದ ಕೋತಿರಾಜ್, ಯಾರಿಗೂ ಯಾವುದೇ ದ್ರೋಹ ಬಗೆಯದೇ ಒಳ್ಳೆಯವನಾಗಿರುವುದು ಹಾಗೂ ನನ್ನನ್ನೇ ನಂಬಿರುವ ನನ್ನ 13 ಮಂದಿ ಮಕ್ಕಳಿಗೆ ಒಳ್ಳೆಯ ಭವಿಷ್ಯ ರೂಪಿಸುವುದು, ಚಿತ್ರದುರ್ಗದಲ್ಲಿ ನನ್ನ ಕನಸನ್ನು ನನಸು ಮಾಡುವುದು ಮಾತ್ರ ನನ್ನ ಜೀವನದ ಗುರಿ ಎಂದರು.









