ಲಂಚ ಪ್ರಕರಣ: ವಿಚಾರಣೆಗೆ ಕಡ್ಡಾಯ ಹಾಜರಾಗಲು ಬಿಜೆಪಿ ಶಾಸಕ ಮಾಡಾಳ್‍ಗೆ ನೋಟಿಸ್

ಬೆಂಗಳೂರು: ಟೆಂಡರ್ ಕೊಡಿಸುವುದಾಗಿ ಕಮಿಷನ್ ಪಡೆದ ಆರೋಪ ಪ್ರಕರಣ ಸಂಬಂಧ ಬಿಜೆಪಿ ಶಾಸಕ ಕೆ.ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಲೋಕಾಯುಕ್ತ ನೋಟಿಸ್ ನೀಡಿದ್ದು, ಸೋಮವಾರ (ಮಾ.6) ಕಡ್ಡಾಯವಾಗಿ ವಿಚಾರಣೆಗೆ ಹಾಜರುವಂತೆ ಸೂಚಿಸಿದೆ ಎಂದು ವರದಿಯಾಗಿದೆ.
ಲಂಚ ಸ್ವೀಕಾರ ಆರೋಪ ಸಂಬಂಧ ಸಿಆರ್‍ಪಿಸಿ 41 ‘ಎ’ ಅಡಿಯಲ್ಲಿ ನೋಟಿಸ್ ಜಾರಿ ಮಾಡಲಾಗಿದ್ದು, ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಖುದ್ದು ವಿಚಾರಣೆಗೆ ಹಾಜರಾಗುವಂತೆ ಉಲ್ಲೇಖಿಸಲಾಗಿದೆ. ಇನ್ನೂ, ನೋಟಿಸ್ ಪ್ರತಿಯನ್ನು ಶಾಸಕರ ಅಧಿಕೃತ ನಿವಾಸ, ಕಚೇರಿ ಒಳಗೊಂಡತೆ ಮೂರು ಕಡೆಗಳಲ್ಲಿ ಅಂಟಿಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮತ್ತೊಂದೆಡೆ ಮಾಡಾಳ್ ವಿರೂಪಾಕ್ಷಪ್ಪ ಅವರ ಬ್ಯಾಂಕ್ ಖಾತೆ ಹಾಗೂ ಅವರ ಆಪ್ತರ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ನೀಡುವಂತೆ ಲೋಕಾಯುಕ್ತ ಅಧಿಕಾರಿಗಳು ಸಂಬಂಧಿಸಿದಂತೆ ಬ್ಯಾಂಕ್‍ಗಳ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ಎಫ್‍ಐಆರ್: ಲಂಚ ಸ್ವೀಕಾರ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ಶಾಸಕ ಮಾಡಾಳ್ ವಿರೂಪಾಕ್ಷ ಸೇರಿದಂತೆ ಮತ್ತಿತರರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಶ್ರೇಯಸ್ ಕಶ್ಯಪ್ ನೀಡಿದ್ದ ದೂರಿನ ಅನ್ವಯ ದಾಖಲಾದ ಎಫ್‍ಐಆರ್‍ನಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಮೊದಲ ಆರೋಪಿ ಆಗಿದ್ದು, ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್ 2ನೆ ಆರೋಪಿ. ಅದೇ ರೀತಿ, ಕೆಎಸ್‍ಡಿಎಲ್ ಅಕೌಂಟೆಂಟ್ ಸುರೇಂದ್ರ, ಮಾಡಾಳ್ ಪ್ರಶಾಂತ್ ಸಂಬಂಧಿ ಸಿದ್ದೇಶ್, ಅರೋಮಾ ಕಂಪೆನಿ ಸಿಬ್ಬಂದಿಗಳಾದ ಆಲ್ಬರ್ಟ್ ನಿಕೋಲಾ, ಗಂಗಾಧರ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಅದೇ ರೀತಿ, ಚನ್ನಗಿರಿಯ ಮಾಡಾಳ್ ವಿರೂಪಾಕ್ಷಪ್ಪ ಮನೆಯಲ್ಲಿ 16.5ಲಕ್ಷ ರೂ. ಪತ್ತೆಯಾಗಿರುವ ಘಟನೆಗೆ ಸಂಬಂಧಿಸಿ ಇನ್ನೊಂದು ಎಫ್‍ಐಆರ್ ದಾಖಲು ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮಕ್ಕಳ ಹೆಸರಿನಲ್ಲಿ ಗುಟ್ಕಾ ಕಂಪೆನಿ ಆರಂಭಿಸಿದ್ದ ಮಾಡಾಳ್?: ‘ಇತ್ತೀಚಿಗೆ ತಮ್ಮ ಮೂವರು ಮಕ್ಕಳ ಹೆಸರಿನ ಮೊದಲ ಇಂಗ್ಲಿμï ಅಕ್ಷರಗಳನ್ನು ಒಳಗೊಂಡ ಒಂದು ಗುಟ್ಕಾ ಬ್ರಾಂಡ್ ಕಂಪೆನಿಯನ್ನು ಶುರು ಮಾಡಿದ್ದು, ಅದಕ್ಕೆ ಎಂಆರ್‍ಪಿ ಎಂದು ಹೆಸರಿಟ್ಟಿದ್ದರು ಎನ್ನಲಾಗಿದೆ.
ಸ್ವಗ್ರಾಮ ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದಲ್ಲಿ ಎರಡು ತಿಂಗಳ ಹಿಂದೆ ‘ಎಂಆರ್‍ಪಿ’ ಎಂಬ ಹೆಸರಿನ ಗುಟ್ಕಾ ಕಂಪೆನಿ ಆರಂಭ ಮಾಡಿದ್ದರು. MRP ಎಂದರೆ, ಎಂ-ಮಲ್ಲಿಕಾರ್ಜುನ, ಆರ್-ರಾಜಣ್ಣ ಹಾಗೂ ಪಿ-ಪ್ರಶಾಂತ್ ಎಂದು ಹೇಳಲಾಗುತ್ತಿದೆ.
ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕೋರ್ಟ್ ಮೊರೆ ಹೋಗಿದ್ದು, ಮಾಧ್ಯಮಗಳ ವಿರುದ್ಧ ನಿರ್ಬಂಧ ಹೇರುವಂತೆ ಕೋರಿದ್ದಾರೆ. ಈ ಸಂಬಂಧ ನಗರದ ಸಿವಿಲ್ ನ್ಯಾಯಾಲಯ ವಿಚಾರಣೆಯನ್ನು ಮಾ.6ಕ್ಕೆ ಮುಂದೂಡಿದೆ.
ಕೆಎಎಸ್ ಅಧಿಕಾರಿಯಲ್ಲ: ‘ಲೋಕಾಯುಕ್ತ ಬಲೆಗೆ ಬಿದ್ದ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಹೊರತು, ಕೆಎಎಸ್ ಅಥವಾ ಈ ಶ್ರೇಣಿಯ ಅಧಿಕಾರಿಯಲ್ಲ. ಹೀಗಾಗಿ, ಅವರನ್ನು ಕೆಎಎಸ್ ಅಧಿಕಾರಿ ಎಂದು ಉಲ್ಲೇಖಿಸುವುದು ಸರಿಯಲ್ಲ ಎಂದು ಕರ್ನಾಟಕ ಆಡಳಿತ ಸೇವೆ (ಕೆಎಎಸ್)ಅಧಿಕಾರಿಗಳ ಸಂಘ ಸ್ಪಷ್ಟನೆ ನೀಡಿದೆ.