ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪ: ಏಶ್ಯಾನೆಟ್ ಕಚೇರಿಗೆ ಎಸ್ಎಫ್ಐ ದಾಳಿ

ಎರ್ನಾಕುಳಂ(ಕೇರಳ),ಮಾ.4: ಉತ್ತರ ಕೇರಳದ ಶಾಲೆಯೊಂದರಲ್ಲಿ 10ಕ್ಕೂ ಅಧಿಕ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿ ಸುಳ್ಳುಸುದ್ದಿಯನ್ನು ಪ್ರಸಾರ ಮಾಡಿದೆ ಎಂದು ಆರೋಪಿಸಿ ಸ್ಟುಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್ಎಫ್ಐ) ಕಾರ್ಯಕರ್ತರು ಶುಕ್ರವಾರ ರಾತ್ರಿ ಇಲ್ಲಿಯ ಏಶ್ಯಾನೆಟ್ ನ್ಯೂಸ್ ನ ಪ್ರಾದೇಶಿಕ ಮುಖ್ಯ ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ.
ಸುಮಾರು 30 ಎಸ್ಎಫ್ಐ ಕಾರ್ಯಕರ್ತರು ರಾತ್ರಿ 7:30ರ ಸುಮಾರಿಗೆ ಕಚೇರಿಗೆ ನುಗ್ಗಿ ಭದ್ರತಾ ಸಿಬ್ಬಂದಿಗಳನ್ನು ಪಕ್ಕಕ್ಕೆ ತಳ್ಳಿ ಘೋಷಣೆಗಳನ್ನು ಕೂಗುತ್ತ ದಾಂಧಲೆ ನಡೆಸಿದ್ದಾರೆ ಮತ್ತು ಕಚೇರಿಯ ಸಿಬ್ಬಂದಿಗಳು ಮತ್ತು ಪತ್ರಕರ್ತರಿಗೆ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಎಸ್ಎಫ್ಐ ಸಿಪಿಎಮ್ನ ವಿದ್ಯಾರ್ಥಿ ಘಟಕವಾಗಿದೆ.
ಕಳೆದ ವರ್ಷ ರಾಜ್ಯದಲ್ಲಿ ಮಾದಕ ದ್ರವ್ಯ ಸಮಸ್ಯೆ ಕುರಿತು ತನ್ನ ಕಾರ್ಯಕ್ರಮದ ಭಾಗವಾಗಿ ಏಶ್ಯಾನೆಟ್ ನ್ಯೂಸ್, ಶಾಲೆಯೊಂದರಲ್ಲಿ ಹತ್ತಕ್ಕೂ ಅಧಿಕ ವಿದ್ಯಾರ್ಥಿನಿಯರ ಮೇಲೆ ನಡೆದಿತ್ತೆನ್ನಲಾದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿಯನ್ನು ಪ್ರಸಾರಿಸಿತ್ತು ಎಂದು ಸಿಪಿಎಂ ಆರೋಪಿಸಿತ್ತು.
ಕೇರಳ ಪೊಲೀಸರು ಸ್ಥಳಕ್ಕೆ ಆಗಮಿಸುವ ಮುನ್ನ ಎಸ್ಎಫ್ಐ ಕಾರ್ಯಕರ್ತರು ‘ಈ ಸುದ್ದಿಸಂಸ್ಥೆಯು ಕೇರಳದ ಸಂಸ್ಕೃತಿಗೆ ಅವಮಾನವಾಗಿದೆ ’ಎಂಬ ಬ್ಯಾನರ್ನ್ನೂ ಕಚೇರಿಯ ಹೊರಗೆ ಕಟ್ಟಿದ್ದರು.
ಏಶ್ಯಾನೆಟ್ ನ್ಯೂಸ್ನ ಸ್ಥಾನಿಕ ಸಂಪಾದಕ ಅಭಿಲಾಷ ಜಿ.ನಾಯರ್ ದೂರಿನ ಮೇರೆಗೆ ಪಾಲಾರಿವಟ್ಟಂ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಎಸ್ಎಫ್ಐ ಕಾರ್ಯಕರ್ತರು ಭದ್ರತಾ ಸಿಬ್ಬಂದಿಗಳನ್ನು ಪಕ್ಕಕ್ಕೆ ತಳ್ಳಿ ಬಲವಂತದಿಂದ ಕಚೇರಿಯನ್ನು ಪ್ರವೇಶಿಸಿರುವ ಸಿಸಿಟಿವಿ ಫೂಟೇಜ್ ಅನ್ನೂ ಪೊಲೀಸರಿಗೆ ಸಲ್ಲಿಸಲಾಗಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪ್ರೆಸ್ ಕ್ಲಬ್ ಆಫ್ ಇಂಡಿಯಾ ಈ ಕುರಿತು ತನಿಖೆಗೆ ಕೇರಳ ಸರಕಾರವನ್ನು ಆಗ್ರಹಿಸಿದೆ. ‘ಎಸ್ಎಫ್ಐ ಕಾರ್ಯಕರ್ತರು ಏಶ್ಯಾನೆಟ್ ನ್ಯೂಸ್ ಕಚೇರಿಗೆ ನುಗ್ಗಿ ಸಿಬ್ಬಂದಿಗೆ ಬೆದರಿಕೆಯೊಡ್ಡಿರುವ ಬಗ್ಗೆ ನಾವು ಕಳವಳ ವ್ಯಕ್ತಪಡಿಸುತ್ತೇವೆ ಮತ್ತು ಇದನ್ನು ಖಂಡಿಸುತ್ತೇವೆ. ಈ ತೋಳ್ಬಲದ ತಂತ್ರಗಳಿಗೆ ಪ್ರಜಾಪ್ರಭುತ್ವದಲ್ಲಿ ಸ್ಥಾನವಿಲ್ಲ. ಕೇರಳ ಸರಕಾರವು ಈ ಘಟನೆಯ ಬಗ್ಗೆ ತ್ವರಿತ ತನಿಖೆಯನ್ನು ನಡೆಸಬೇಕು ’ಎಂದು ಅದು ಟ್ವೀಟಿಸಿದೆ.







