ಕೋವಿಡ್ ಲಸಿಕೆ ಸಂಶೋಧಿಸಿದ ರಶ್ಯದ ವಿಜ್ಞಾನಿಯ ಹತ್ಯೆ

ಮಾಸ್ಕೊ, ಮಾ.4: ಕೋವಿಡ್ ಸೋಂಕಿನ ವಿರುದ್ಧದ ಲಸಿಕೆ ಸ್ಪುಟ್ನಿಕ್ ವಿಯನ್ನು ಸಂಶೋಧಿಸಿದ ರಶ್ಯ ವಿಜ್ಞಾನಿಗಳ ತಂಡದಲ್ಲಿದ್ದ ಆಂಡ್ರೆಯ್ ಬೊಟಿಕೋವ್ ಮೃತದೇಹ, ಮಾಸ್ಕೋದಲ್ಲಿನ ಅವರ ಅಪಾರ್ಟ್ಮೆಂಟ್ ನಲ್ಲಿ ಕುತ್ತಿಗೆಗೆ ಬೆಲ್ಟ್ ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ರಶ್ಯದ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.
ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
`ಗಾಮಲೆಯ ನ್ಯಾಷನಲ್ ರಿಸರ್ಚ್ ಸೆಂಟರ್ ಫಾರ್ ಇಕಾಲಜಿ ಆ್ಯಂಡ್ ಮ್ಯಾಥೆಮಟಿಕ್ಸ್'ನಲ್ಲಿ ಹಿರಿಯ ಸಂಶೋಧಕರಾಗಿ ಕಾರ್ಯನಿರ್ವಹಿಸಿದ್ದ 47 ವರ್ಷದ ಬೊಟಿಕೊವ್, 2020ರಲ್ಲಿ ಕೋವಿಡ್ ಸೋಂಕಿನ ವಿರುದ್ಧ ರಶ್ಯವು ಸ್ಪುಟ್ನಿಕ್ ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಈ ಸಾಧನೆಗಾಗಿ ಅಧ್ಯಕ್ಷ ಪುಟಿನ್ `ಆರ್ಡರ್ ಆಫ್ ಮೆರಿಟ್' ಗೌರವ ಪ್ರದಾನ ಮಾಡಿದ್ದರು. ಬೊಟಿಕೊವ್ ಜತೆ ಮಾತಿನ ಚಕಮಕಿ ನಡೆಸಿದ್ದ 29 ವರ್ಷದ ಯುವಕ ಬಳಿಕ ಬೊಟಿಕೊವ್ರ ಕುತ್ತಿಗೆಗೆ ಬೆಲ್ಟ್ ಬಿಗಿದು ಹತ್ಯೆ ಮಾಡಿದ್ದಾನೆ. ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಶಂಕಿತನನ್ನು ಬಂಧಿಸಿದ್ದು ತನಿಖಾ ಸಮಿತಿ ಕೊಲೆ ಪ್ರಕರಣ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ ಎಂದು ವರದಿಯಾಗಿದೆ.





