ಇಂಡೋನೇಶ್ಯಾ: ತೈಲ ಡಿಪೊದಲ್ಲಿ ಬೆಂಕಿ; 16 ಮಂದಿ ಮೃತ್ಯು

ಜಕಾರ್ತ, ಮಾ.4: ಇಂಡೊನೇಶ್ಯಾದ ರಾಜಧಾನಿ ಜಕಾರ್ತದಲ್ಲಿ ತೈಲ ಡಿಪೊದಲ್ಲಿ ಶುಕ್ರವಾರ ಸಂಭವಿಸಿದ ಬೆಂಕಿ ದುರಂತದಲ್ಲಿ ಕನಿಷ್ಟ 16 ಮಂದಿ ಮೃತಪಟ್ಟಿದ್ದು 50 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಸ್ಥಳೀಯ ಕಾಲಮಾನ ರಾತ್ರಿ 8 ಗಂಟೆಗೆ ಕಾಣಿಸಿಕೊಂಡ ಬೆಂಕಿಯು ಕ್ಷಿಪ್ರವಾಗಿ ಹರಡಿ ಸಮೀಪದ ಕೆಲವು ಮನೆಗಳನ್ನು ಸುಟ್ಟುಹಾಕಿದೆ. ಬೆಂಕಿಯ ತೀವ್ರತೆಯನ್ನು ಕಂಡು ಭೀತರಾದ ಸ್ಥಳೀಯರು ಸುರಕ್ಷಿತ ಸ್ಥಳಕ್ಕೆ ಪಲಾಯನ ಮಾಡಿದರು. ಇದುವರೆಗೆ ಇಬ್ಬರು ಮಕ್ಕಳ ಸಹಿತ 16 ಮಂದಿ ಮೃತಪಟ್ಟಿರುವುದು ದೃಢಪಟ್ಟಿದ್ದು 50 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರಕಾರ ಭರಿಸಲಿದೆ ಎಂದು ಜಕಾರ್ತದ ಪ್ರಬಾರಿ ಗವರ್ನರ್ ಹೆರುಬುಡಿ ಹೊರಂಟೊರನ್ನು ಉಲ್ಲೇಖಿಸಿ `ರಾಯ್ಟರ್ಸ್' ವರದಿ ಮಾಡಿದೆ.
ತೈಲ ಡಿಪೊದಲ್ಲಿ 3 ಲಕ್ಷ ಕಿಲೊ ಲೀಟರ್ಗಳಷ್ಟು ತೈಲ ಸಂಗ್ರಹಿಸುವ ಸಾಮಥ್ರ್ಯವಿದ್ದು ಬೆಂಕಿಬಿದ್ದ ಬಳಿಕ ಹಲವು ಸ್ಫೋಟದ ಸದ್ದು ಕೇಳಿಸಿವೆ. ಬೆಂಕಿ ದುರಂತದ ಕಾರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.