ಭಾಷಾ ಸಾಮರಸ್ಯದಿಂದ ಉತ್ತಮ ಬದುಕು ಸಾಧ್ಯ: ಶಾಸಕ ಕೆ.ಜಿ.ಬೋಪಯ್ಯ
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಾವಿರಾರು ವರ್ಷಗಳಿಂದ ನಮ್ಮ ಹಿರಿಯರು ಭಾಷಾ ಸಾಮರಸ್ಯ ಕಾಪಾಡಿಕೊಂಡು ಬಂದಿದ್ದಾರೆ, ಅದನ್ನು ಉಳಿಸಿಕೊಂಡು ಹೋಗಬೇಕು. ಕನ್ನಡ ಭಾಷೆಯನ್ನು ಪ್ರೀತಿಸಬೇಕು, ಗೌರವಿಸಬೇಕು ಜೊತೆಗೆ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದ್ದಾರೆ.
ಗೋಣಿಕೊಪ್ಪದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ 16 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಡಾ.ಐ.ಮಾ.ಮುತ್ತಣ್ಣ ವೇದಿಕೆಯಲ್ಲಿ ಮಾತನಾಡಿದ ಅವರು ಕೊಡಗಿನ ವಿಶಿಷ್ಟ ಸಂಸ್ಕೃತಿ ಎಲ್ಲೆಡೆ ಪಸರಿಸಲಿ ಎಂದರು.
ಕೊಡಗಿನ ಗೌರಮ್ಮ, ಪಂಜೆ ಮಂಗೇಶರಾಯರು ಕನ್ನಡ ಸಾಹಿತ್ಯಕ್ಕೆ ಬಹು ದೊಡ್ಡ ಕೊಡುಗೆ ನೀಡಿದ್ದಾರೆ. ಇಂಥಹ ಹಿರಿಯ ಚೇತನಗಳನ್ನು ನೆನಪಿಸಿಕೊಳ್ಳುವ ಮೂಲಕ ಜಿಲ್ಲೆಯ ಸಾಹಿತ್ಯ ಸಂಸ್ಕೃತಿ ಬೆಳವಣಿಗೆಗೆ ಮುಂದಾಗಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಈಚಿಗೆ ಮುಗಿದ ವಿಧಾನಸಭಾ ಅಧಿವೇಷನದಲ್ಲಿ ಸರ್ಕಾರದ ಸುತ್ತೋಲೆಗಳು ಕನ್ನಡದಲ್ಲೆ ಇರಬೇಕು ಎಂಬ ಮಸೂದೆ ಹೊರಡಿಸಲಾಗಿದೆ. ಆಂಗ್ಲ ಮಾಧ್ಯಮ ಶಾಲೆಗಳಲ್ಲೂ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಕನ್ನಡದ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಮಾಜಿ ಅಧ್ಯಕ್ಷರಾದ ಡಾ.ಮನು ಬಳಿಗಾರ್ ಅವರು ಕೊಡಗು ಬಹಳ ವಿಶಿಷ್ಟ ಸಂಸ್ಕೃತಿ ಹೊಂದಿರುವ ಪ್ರದೇಶ. ಇಲ್ಲಿನ ಕೃಷಿ, ಸಂಸ್ಕೃತಿ, ಕೌಟುಂಬಿಕ ವ್ಯವಸ್ಥೆ ಮೊದಲಾದವುಗಳನ್ನು ಸಮರ್ಥವಾಗಿ ದಾಖಲಿಸುವ ಕೆಲಸವಾಗಬೇಕು ಎಂದರು.
ಸಮ್ಮೇಳನ ಧ್ವಜ ಹಸ್ತಾಂತರ: ಸಮ್ಮೇಳನದ ಅಧ್ಯಕ್ಷರಾದ ಡಾ.ಎಂ.ಪಿ.ರೇಖಾ ಅವರಿಗೆ ಕನ್ನಡ ಸಮ್ಮೇಳನದ ಧ್ವಜ ಹಸ್ತಾಂತರಿಸಿದ 15 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಮಂಡೇಪಂಡ ಗೀತಾ ಮಂದಣ್ಣ ಮಾತನಾಡಿ ಸಾಹಿತ್ಯ ಕಮ್ಮಟ ಗಳನ್ನು ಏರ್ಪಡಿಸಿ ಯುವ ಬರಹಗಾರರಿಗೆ ಸಾಹಿತ್ಯ ಕೃಷಿಯ ಬಗ್ಗೆ ಮಾರ್ಗದರ್ಶನ ನೀಡುವುದು ಒಳಿತು. ಸಾಹಿತಿಗಳು ಅರ್ಜಿ ಹಾಕಿ ಪ್ರಶಸ್ತಿ ತೆಗೆದುಕೊಳ್ಳುವುದಕ್ಕಿಂತ ಅವರ ಸಾಧನೆ ಗುರುತಿಸಿ ಪ್ರಶಸ್ತಿ ನೀಡುವಂತಾಗಬೇಕು ಎಂದು ಆಶಿಸಿದರು.
ಪುಸ್ತಕ ಬಿಡುಗಡೆ: ಜಯಪ್ರಕಾಶ್ ಪುತ್ತೂರು ಅವರ ಬದುಕಲು ಬಿಡಿ ಪ್ಲೀಸ್, ಶರ್ಮಿಳಾ ರಮೇಶ್ ಅವರ ಲಹರಿ ಲಲಿತ ಪ್ರಬಂಧ, ಕಿಗ್ಗಾಲು ಗಿರೀಶ್ ಅವರ ಅನಿರೀಕ್ಷಿತ ತಿರುವುಗಳು, ಕೃಪಾ ದೇವರಾಜ್ ಅವರ ಚೌಚೌ ಬಾತ್, ರೆ.ಫಾ.ಪ್ರಾನ್ಸಿಸ್ ಚಿರಯ್ಕಲ್ ಅವರ ಗ್ರಾಮೀಣ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯಿತಿ ಮತ್ತು ಮಹಿಳಾ ಸ್ವಸಹಾಯ ಸಂಘಗಳ ಸಬಲೀಕರಣ ಕೃತಿಗಳನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಬಿಡುಗಡೆ ಮಾಡಿದರು.
ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮೇಳನ ಸ್ಮರಣ ಸಂಚಿಕೆ ಡಿಂಡಿಮದ ಮುಖಪುಟ ಬಿಡುಗಡೆ ಮಾಡಿದರು.
ಸಮ್ಮೇಳನದ ಅಧ್ಯಕ್ಷೆ ಎಂ.ಪಿ.ರೇಖಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಕೋಳೆರ ದಯಾ ಚಂಗಪ್ಪ, ಶೀಲಾ ಬೋಪಣ್ಣ, ಬಹರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಕೆ.ಬಿ.ಗಿರೀಶ್ ಗಣಪತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನ್ನಕ್ಕಮನೆ ಸೌಮ್ಯ ಬಾಲು, ಜಿಲ್ಲಾ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ಎಂಬಿ.ಜೋಯಪ್ಪ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮದ್, ರೇವತಿ ರಮೇಶ್. ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಜೇಶ್ ಪದ್ಮನಾಭ ಹಾಜರಿದ್ದರು.
ನಿರ್ಮಲ ಬೋಪಣ್ಣ, ವಿ.ಟಿ.ಶ್ರೀನಿವಾಸ್ ಮತ್ತು ತಂಡದವರಿಂದ ಕನ್ನಡ ಗೀತೆಗಳ ಗಾಯನ ನಡೆಯಿತು. ಈ ಕಾರ್ಯಕ್ರಮವನ್ನು ಹಿರಿಯ ಕಲಾವಿದೆ ನಿರ್ಮಲಾ ಬೋಪಣ್ಣ ಉದ್ಘಾಟಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹೆಚ್. ಎನ್. ಕುಮಾರ್ ಹಾಜರಿದ್ದರು.
ಆರಂಭದಲ್ಲಿ ಬಿರುನಾಣಿಯ ಶಿಕ್ಷಕ ನಾಗರಾಜು, ವಿ.ಟಿ.ಶ್ರೀನಿವಾಸ್, ರೇಖಾ ಶ್ರೀಧರ್. ಎಸ್.ಟಿ.ಗಿರೀಶ್ ಹಾಗೂ ತಂಡದವರು ನಾಡಗೀತೆ ಹಾಗೂ ರೈತಗೀತೆ ಹಾಡಿದರು.