ಸಿಲಿಂಡರ್ ರಿಫಿಲ್ಲಿಂಗ್ ವೇಳೆ ಸ್ಫೋಟ: ಬಾಲಕ ಮೃತ್ಯು

ಬೆಂಗಳೂರು, ಮಾ.5: ಸಿಲಿಂಡರ್ ರಿಫಿಲ್ಲಿಂಗ್ ಮಾಡುವ ವೇಳೆ ಏಕಾಏಕಿ ಸ್ಫೋಟಗೊಂಡು 13 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಇಲ್ಲಿನ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೆಬ್ಬಾಳ ಸಮೀಪದ ಗುಡ್ಡದಹಳ್ಳಿ ನಿವಾಸಿ ಮಹೇಶ್ (13) ಮೃತ ದುರ್ದೈವಿ ಎಂದು ಪೊಲೀಸರು ಗುರುತಿಸಿದ್ದಾರೆ.
ಯಾದಗಿರಿ ಜಿಲ್ಲೆಯ ರಾಮಸಮುದ್ರ ಗ್ರಾಮದ ನಿವಾಸಿಗಳಾದ ಮಲ್ಲಪ್ಪ, ಸರಸ್ವತಿ ದಂಪತಿ ಕಳೆದ ಎಂಟು ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಚೋಳನಾಯಕನಹಳ್ಳದ ಸರಕಾರಿ ಶಾಲೆಯಲ್ಲಿ 6ನೆ ತರಗತಿಯಲ್ಲಿ ಮಹೇಶ್ ಓದುತ್ತಿದ್ದ ಎನ್ನಲಾಗಿದೆ.
ರವಿವಾರ ಬೆಳಗ್ಗೆ ಮನೆಯ ಪಕ್ಕದಲ್ಲಿ ಆಟವಾಡುತ್ತಿದ್ದಾಗ ಸಮೀಪದ ದೇವರಾಜ್ ಎಂಬುವರಿಗೆ ಸೇರಿದ ಸಿಲಿಂಡರ್ ರಿಫಿಲ್ಲಿಂಗ್ ಮಾಡುವ ಗೋದಾಮಿನಲ್ಲಿ ಲಿಯಾಖತ್ ಎಂಬಾತ ಸಿಲಿಂಡರ್ ರಿಫಿಲ್ಲಿಂಗ್ ಮಾಡುತ್ತಿದ್ದ ವೇಳೆ ಏಕಾಏಕಿ ಸ್ಫೋಟಗೊಂಡಿದೆ. ಈ ವೇಳೆ ಮಹೇಶ್ ದೇಹ ಸ್ಫೋಟದ ರಭಸಕ್ಕೆ ಛಿದ್ರಗೊಂಡಿದೆ.
ಕೂಡಲೇ ಸ್ಥಳೀಯರ ನೆರವಿನಿಂದ ಪೋಷಕರು ಖಾಸಗಿ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವಿಗೀಡಾಗಿದ್ದಾನೆ. ಮಗನ ಮೃತದೇಹದ ಮುಂದೆ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಹೆಬ್ಬಾಳ ಠಾಣಾ ಪೊಲೀಸರು 6 ಸಿಲಿಂಡರ್ ಜಪ್ತಿ ಮಾಡಿದ್ದು, ತನಿಖೆ ಕೈಗೊಂಡಿದ್ದಾರೆ.