ಮಾ.12 ರಂದು ಮಂಡ್ಯದಲ್ಲಿ ಮೋದಿ ರೋಡ್ ಶೋ

ಮಂಡ್ಯ, ಮಾ.5: ಪ್ರಧಾನಮಂತ್ರಿ ನರೇಂದ್ರ ಮೋದಿ ಮಾ12 ರಂದು ಮಂಡ್ಯ ನಗರದ ಪ್ರವಾಸಿಮಂದಿರ ವೃತ್ತದಿಂದ ನಂದಾ ವೃತ್ತದವರೆಗೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ರಸ್ತೆಯ ಶುಚಿತ್ವ, ದುರಸ್ತಿ ಕುರಿತು ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ ಅವರು ಅಧಿಕಾರಿಗಳ ತಂಡದೊಂದಿಗೆ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿ ನಾಳೆಯಿಂದ ಎಲ್ಲಾ ಕೆಲಸಗಳು ಪ್ರಾರಂಭವಾಗಬೇಕು ಎಂದು ಸೂಚಿಸಿದರು.
ಪ್ರವಾಸಿಮಂದಿರದ ಸರ್ಕಲ್ ನಿಂದ ರೋಡ್ ಶೋ ಪ್ರಾರಂಭವಾಗಿ, ಸಂಜಯ್ ಸರ್ಕಲ್ ಮಾರ್ಗವಾಗಿ ನಂದ ಸರ್ಕಲ್ ನಲ್ಲಿ ರೋಡ್ ಶೋ ಮುಕ್ತಾಯವಾಗಲಿದೆ. ಸುಮಾರು 1.5 ಕಿ.ಮೀ ರೋಡ್ ಶೋ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್ .ಎಲ್.ನಾಗರಾಜು, ತಹಶೀಲ್ದಾರ್ ವಿಜಯ್ ಕುಮಾರ್, ನಗರಸಭಾ ಆಯುಕ್ತ ಮಂಜುನಾಥ್, ಪರಿಸರ ವಿಭಾಗದ ಅಭಿಯಂತರ ರುದ್ರೇಗೌಡ, ಅಭಿಯಂತರ ರವಿಕುಮಾರ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ನರೇಶ್ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.