ಮಂಗಳೂರು ಪ್ರೆಸ್ ಕ್ಲಬ್ ಡೇ, ರಜನಿ ಶೆಟ್ಟಿಗೆ ವರ್ಷದ ಪ್ರಶಸ್ತಿ ಪ್ರದಾನ, ಹಿರಿಯ ಪತ್ರಕರ್ತರಿಗೆ ಗೌರವ ಸನ್ಮಾನ

ಮಂಗಳೂರು : ನನ್ನ ಯಶಸ್ಸಿನಲ್ಲಿ ಮಾಧ್ಯಮಗಳ ಕೊಡುಗೆ ದೊಡ್ಡದು. ನಮ್ಮ ಟಿವಿ ಆ್ಯಂಕರ್ ಆಗಿ ವೃತ್ತಿರಂಗಕ್ಕೆ ಕಾಲಿರಿಸಿದ ತಮಗೆ ಮಾಧ್ಯಮಗಳ ಪ್ರೋತ್ಸಾಹದಿಂದಾಗಿ ಬಿಗ್‌ಬಾಸ್ ವಿನ್ನರ್ ಆಗಿ ಮಿಂಚಲು ಸಾಧ್ಯವಾಯಿತು ಚಲನಚಿತ್ರ ನಟ, ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಹೇಳಿದ್ದಾರೆ.
ಬೋಳೂರು ಕುಡ್ಲ ಕುದ್ರುವಿನ ಪ್ಯಾರಡೈಸ್ ಐಲ್ಯಾಂಡ್‌ನಲ್ಲಿ ರವಿವಾರ ನಡೆದ ಪ್ರೆಸ್ ಕ್ಲಬ್ ದಿನಾಚರಣೆ, ವಾರ್ಷಿಕ ಪ್ರಶಸ್ತಿ ಪ್ರದಾನ ಮತ್ತು ಹಿರಿಯ ಪತ್ರಕರ್ತರಿಗೆ ಪ್ರೆಸ್ ಕ್ಲಬ್ ಗೌರವ ಪುರಸ್ಕಾರ ನೆರವೇರಿಸಿ ಮಾತನಾಡಿದರು. ಪತ್ರಕರ್ತರಿಗೂ ಕಾರ್ಯದ ಒತ್ತಡದಿಂದ ಸ್ವಲ್ಪ ಬಿಡುವು ಪಡೆಯಲು ಇಂತಹ ಕಾರ್ಯಕ್ರಮಗಳು ಅಗತ್ಯ ಎಂದರು.
ಬೀಡಾಡಿ ಮೂಕ ಪ್ರಾಣಿಗಳಿಗೆ ಅನ್ನಾಹಾರ ಹಾಕಿ ಪೋಷಿಸುತ್ತಿರುವ ರಜನಿ ಶೆಟ್ಟಿಯವರಿಗೆ ಪ್ರೆಸ್ ಕ್ಲಬ್‌ನ ವರ್ಷದ ಪ್ರಶಸ್ತಿಯನ್ನು ನೀಡಿರುವುದು ಶ್ಲಾಘೀನಿಯ ಅವರಿಗೆ ಸಮಾಜದಿಂದ ಇನ್ನಷ್ಟು ಪ್ರೋತ್ಸಾಹದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಮಾಧ್ಯಮ ಅಕಾಡಮಿ ಅಧ್ಯಕ್ಷ ಸದಾಶಿವ ಶೆಣೈ ಅವರು ರಜನಿ ಶೆಟ್ಟಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಶ್ಲಾಘಿಸಿದರು. ಪತ್ರಕರ್ತರು ಪ್ರಶಸ್ತಿ, ಸನ್ಮಾನಗಳಿಗಿಂತ ಲೇಖನಿ ಮೂಲಕ ಜನತೆಗೆ ಸಹಾಯ ಮಾಡುತ್ತಾರೆ. ಮಂಗಳೂರಿನ ಪತ್ರಕರ್ತರಿಗೆ ವಿಶೇಷ ಸ್ಥಾನಮಾನ ಇದೆ. ರಾಜ್ಯದ ಎಲ್ಲ ಕಡೆಗಳಲ್ಲಿ ಗೌರವದ ಹೆಸರು ಇದೆ. ಸಮಾಜಮುಖಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಅಭಿನಂದನೀಯ ಎಂದರು.
ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಸಂರಕ್ಷಣಾ ಸಂಘವನ್ನು ರಚಿಸಿಲಾಗಿತ್ತು. ಅದರ ಉದ್ಘಾಟನೆಗೆ ನಟಿಯೊಬ್ಬರು ಮೆಕಪ್ ಮಾಡಿ ಬಂದಿದ್ದರು. ಆಗ ಅವರನ್ನು ಬೀದಿ ನಾಯಿಗಳು ಅಟ್ಟಾಡಿಸಿ ಕೊಂಡು ಹೋಗಿತ್ತು. ಆ ಬಳಿಕ ನಟಿ ಬದಲಾಗಿ ಬೀದಿ ನಾಯಿಗಳನ್ನು ಪೋಷಿಸುವ ಕಡೆಗೆ ಗಮನ ಹರಿಸಿದರು ಎಂದು ಸದಾಶಿವ ಶೆಣೈ ನೆನಪಿಸಿಕೊಂಡರು.
ಜವಾಬ್ದಾರಿ ಹೆಚ್ಚಿದೆ: ಸನ್ಮಾನ ಸ್ವೀಕರಿಸಿ ಮಾತನಾಡಿದ ರಜನಿ ಶೆಟ್ಟಿ, ಕಳೆದ 22 ವರ್ಷಗಳಿಂದ ಬೀಡಾಡಿ ನಾಯಿಗಳಿಗೆ ಆಶ್ರಯ ನೀಡುತ್ತಿದ್ದೇನೆ. ನಮ್ಮಷ್ಟೆ ಬದುಕುವ ಅಧಿಕಾರ ಮೂಕಪ್ರಾಣಿಗಳಿಗೂ ಇದೆ. ನನ್ನ ಈ ಕಾರ್ಯಕ್ಕೆ ಟೀಕೆ, ವಿರೋಧಗಳೂ ವ್ಯಕ್ತವಾಗಿದೆ. ಆದರೂ ಎದೆಗುಂದದೆ ಪ್ರಾಣಿ ಪ್ರೇಮಿಗಳ ನೆರವು ಹಾಗೂ ಪ್ರೋತ್ಸಾಹದಿಂದ ಬೀಡಾಡಿ ನಾಯಿಗಳ ಆರೈಕೆ ಮಾಡುತ್ತಿದ್ದೇನೆ. ಈಗ 800 ಬೀಡಾಡಿ ನಾಯಿಗಳಿಗೆ ನಿತ್ಯವೂ ಆಹಾರ ಉಣಿಸುತ್ತಿದ್ದೇನೆ. ಪ್ರೆಸ್‌ಕ್ಲಬ್ ಪ್ರಶಸ್ತಿಯಿಂದ ನನ್ನ ಜವಾಬ್ದಾರಿ ಇನ್ನೂ ಹೆಚ್ಚಿದೆ ಎಂದು ಪ್ರಶಸ್ತಿ ಪುರಸ್ಕೃತ ರಜನಿ ಶೆಟ್ಟಿ ಅಭಿಪ್ರಾಯಪಟ್ಟರು.
ಹಿರಿಯ ಪತ್ರಕರ್ತರಾದ ವಾರ್ತಾಭಾರತಿ ಕನ್ನಡ ದಿನಪತ್ರಿಕೆಯ ಮಂಗಳೂರು ನಗರ ಕಚೇರಿಯ ಬ್ಯುರೊ ಮುಖ್ಯಸ್ಥ ಪುಷ್ಪರಾಜ್ ಬಿ.ಎನ್ ಮತ್ತು ಹಿರಿಯ ವರದಿಗಾರ ಇಬ್ರಾಹಿಂ ಅಡ್ಕಸ್ಥಳ, ವಿಜಯ ಕರ್ನಾಟಕದ ಬಿ.ರವೀಂದ್ರ ಶೆಟ್ಟಿ ಹಾಗೂ ಜಿನ್ನಪ್ಪ ಗೌಡ, ಹೊಸದಿಗಂತದ ಪ್ರಕಾಶ್ ಇಳಂತಿಲ ಮತ್ತು ಐ.ಬಿ.ಸಂದೀಪ್ ಕುಮಾರ್, ಟೈಮ್ಸ್ ಆಫ್ ಇಂಡಿಯಾದ ವಿನೋಬಾ ಕೆ.ಟಿ, ಫೋಟೊ ಜರ್ನಲಿಸ್ಟ್ ರಾಮಕೃಷ್ಣ ಭಟ್, ಸಂಯುಕ್ತ ಕರ್ನಾಟಕದ ರಾಮಕೃಷ್ಣ .ಆರ್ ಅವರಿಗೆ ಪ್ರೆಸ್ ಕ್ಲಬ್‌ನ ಗೌರವ ಸನ್ಮಾನ ನೆರವೇರಿಸಲಾಯಿತು.
ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು ಅಧ್ಯಕ್ಷತೆ ವಹಿಸಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್ ಎಚ್.ಜಿ. ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿದರು.
ಮಂಗಳೂರಿನ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಬೆಳ್ತಂಗಡಿ ಮತ್ತು ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಇಸಿಜಿ ಯಂತ್ರ ಹಸ್ತಾಂತರ ಮಾಡಿದರು. ಪತ್ರಕರ್ತರಿಗೆ ಸಾಂಕೇತಿಕವಾಗಿ ಹೃದ್ರೋಗ ತಪಾಸಣೆ ಓಚರ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ನಿರ್ಜನ, ಗುಡ್ಡಗಾಡು ಪ್ರದೇಶ ಹಾಗೂ ವೈದ್ಯರಿಲ್ಲದ ಹಳ್ಳಿಗಳಿಗೆ ಇಸಿಜಿ ಯಂತ್ರವನ್ನು ಉಚಿತವಾಗಿ ನೀಡಲಾಗಿದೆ. ಕಡಬ ಹೋಬಳಿಯ ಎಲ್ಲ ಹಳ್ಳಿಗಳಿಗೆ ಇಸಿಜಿ ಯಂತ್ರ ನೀಡುವ ಉದ್ದೇಶ ಹೊಂದಲಾಗಿದೆ. ಇದು ಹೃದ್ರೋಗದ ತುರ್ತು ಸಂದರ್ಭಗಳಲ್ಲಿ ನೆರವಿಗೆ ಬರುವುದು ಸಮಾಧಾನ ಸಂಗತಿ ಎಂದರು.
ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಕೆ.ಆನಂದ ಶೆಟ್ಟಿ , ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ .ಆರ್, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಸದಸ್ಯ ಪಿ.ಬಿ.ಹರೀಶ್ ರೈ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.
ಮಂಗಳೂರು ಪ್ರೆಸ್ ಕ್ಲಬ್‌ನ ಅಧ್ಯಕ್ಷ ಅನ್ನು ಮಂಗಳೂರು ಸ್ವಾಗತಿಸಿದರು. ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಆರಿಫ್ ಪಡುಬಿದ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತರಾದ ಪುಷ್ಪರಾಜ್ ಬಿ.ಎನ್, ಆತ್ಮಭೂಷಣ್, ಹರೀಶ್ ಮೋಟುಕಾನ ಸನ್ಮಾನಿತರ ಪರಿಚಯ ಮಾಡಿದರು. ಪತ್ರಕರ್ತ ದಿನೇಶ್ ಇರಾ ಕಾರ್ಯಕ್ರಮ ನಿರೂಪಿಸಿದರು. ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.
ಸಮಾರಂಭದಲ್ಲಿ ನಿಖಿಲ್ ನಿರೂಪಣೆಯಲ್ಲಿ ಪತ್ರಕರ್ತರ ಸಂಘದ ಸದಸ್ಯರಿಗೆ , ಅವರ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಜೂ.23ರಂದು ‘ಸರ್ಕಸ್’ ಸಿನಿಮಾ ತೆರೆಗೆ
ಚಿತ್ರನಟ ರೂಪೇಶ್ ಶೆಟ್ಟಿ ಅಭಿಯನದ ಬಹುನಿರೀಕ್ಷಿತ ಸಿನಿಮಾ ‘ಸರ್ಕಸ್’ ಜೂ.23ರಂದು ತೆರೆ ಕಾಣಲಿದೆ. ಇದರ ಅಧಿಕೃತ ಘೋಷಣೆ ಮಾ.೬ರಂದು ಹೊರಡಿಸಲಾಗುತ್ತದೆ ಎಂದು ಸ್ವತಃ ರೂಪೇಶ್ ಶೆಟ್ಟಿ ತಿಳಿಸಿದರು.