ಸಂಸ್ಕಾರದಿಂದ ಮಾತ್ರ ನೈತಿಕ ಶಿಕ್ಷಣ ಸಾಧ್ಯ: ನ್ಯಾಯಮೂರ್ತಿ ಅರವಿಂದ್ ಕುಮಾರ್

ಬೆಂಗಳೂರು, ಮಾ.5: ‘ನೈತಿಕ ಶಿಕ್ಷಣ ಎಂಬುದು ಯಾವುದೇ ವಿಶ್ವ ವಿದ್ಯಾಲಯ-ಕಾಲೇಜುಗಳಲ್ಲಿ ಕಲಿಸುವುದಿಲ್ಲ. ಸಂಸ್ಕಾರದಿಂದ ಮಾತ್ರ ನೈತಿಕ ಶಿಕ್ಷಣ ಪಡೆಯಲು ಸಾಧ್ಯ’ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಹೇಳಿದ್ದಾರೆ.
ರವಿವಾರ ಜಯನಗರದ ವಿಜಯ ಪಿಯು ಕಾಲೇಜು ಬಳಿಯ ಮೈದಾನದಲ್ಲಿ ಕೆ.ಆರ್.ನಗರದ ಯಡತೊರೆ ಯೋಗನಾಂದೇಶ್ವರ ಸರಸ್ವತಿ ಮಠದ ಶಂಕರಭಾರತಿ ಸ್ವಾಮಿಗಳ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನೆಯಲ್ಲಿ ತಂದೆ ತಾಯಿಗಳು ನೈತಿಕ ಶಿಕ್ಷಣ ಕಲಿಸಬೇಕು. ಪ್ರತಿಯೊಬ್ಬರೂ ಮನೆಗಳಲ್ಲಿ ಸತ್ಯ, ಸಂಗೀತ, ನೃತ್ಯ, ಸಂಸ್ಕಾರ, ವೇದ, ಶ್ಲೋಕಗಳನ್ನು ಹೇಳಿಕೊಡಬೇಕು. ಇದರಿಂದ ನೈತಿಕತೆಯ ಪ್ರೇರಣೆ ದೊರೆಯಲಿದೆ ಎಂದರು.
ಪ್ರತಿಯೊಬ್ಬರೂ ಸಂವಿಧಾನದ ಹಕ್ಕುಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಸಂವಿಧಾನದಲ್ಲಿ ಕರ್ತವ್ಯಗಳು ಅತ್ಯಂತ ಮುಖ್ಯವಾಗಿದೆ. ಸಂವಿಧಾನದ 54(ಎಫ್) ವಿಧಿಯಲ್ಲಿ ನಮ್ಮ ಕರ್ತವ್ಯಗಳ ಬಗ್ಗೆ ಹೇಳಿದ್ದು, ಅದರಲ್ಲಿ ನಮ್ಮ ಸಂಸ್ಕೃತಿಯ ಮೌಲ್ಯವನ್ನು ಗೌರವಿಸಬೇಕು ಎಂದು ಹೇಳಿದೆ. ಶ್ರೀಮಂತ ಸಾಂಪ್ರಾಯಿಕ ಹಾಗೂ ಉನ್ನತ ಸಾಂಸ್ಕೃತಿಕ ಮೌಲ್ಯಗಳಿಂದ ಸಾಂಸ್ಕøತಿಕ ಮೌಲ್ಯಗಳನ್ನು ಉಳಿಸಲು ಸಾಧ್ಯ ಎಂದು ಪ್ರತಿಪಾದಿಸಿದರು.
ನಮ್ಮ ದೇಶದ ಬಗ್ಗೆ ಪ್ರೀತಿ ಮಾಡದಿದ್ದರೆ ಇನ್ನೇನು ಸಾಧಿಸಲು ಸಾಧ್ಯ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಶ್ರೀರಾಮನೂ ಜನ್ಮಕೊಟ್ಟ ತಾಯಿ, ಜನ್ಮಕೊಟ್ಟ ಭೂಮಿ ಎಲ್ಲದಕ್ಕಿಂತ ಮುಖ್ಯ ಎಂದು ಹೇಳಿದ್ದ. ಸಂಪ್ರದಾಯಗಳನ್ನು ಎಲ್ಲರೂ ಎತ್ತಿ ಹಿಡಿಯಬೇಕು. ನಮ್ಮ ಸಂಸ್ಕøತಿ, ಪರಂಪರೆ ಇಂದಿನದಲ್ಲ, ಸಿಇಟಿ, ನೀಟ್ ಎಂಬ ವ್ಯವಸ್ಥೆ 1600 ವರ್ಷಗಳಿಗೂ ಮುಂಚೆಯೇ ಇತ್ತು ಎಂದು ತಿಳಿಸಿದ್ದಾರೆ.
ನಳಂದ, ತಕ್ಷಶಿಲೆ ವಿವಿಗಳಲ್ಲಿ ಪ್ರವೇಶ ಪಡೆಯಲು 147 ರಾಷ್ಟ್ರಗಳು ಬರುತ್ತಿದ್ದರು. ಆಗ ಇಂತಹ ವಿದ್ಯಾರ್ಥಿಗಳನ್ನು ದ್ವಾರಪಾಲಕರು ಐದು ಪ್ರಶ್ನೆಗಳನ್ನು ಕೇಳಿ ಶಿಕ್ಷಣ ಪಡೆಯಲು ಅರ್ಹರೋ ಇಲ್ಲವೋ ಎಂಬುದನ್ನು ನಿರ್ಧರಿಸಿ ವಿವಿ ಆವರಣಕ್ಕೆ ಬಿಟ್ಟುಕೊಳ್ಳುತ್ತಿದ್ದರು. ದ್ವಾರಪಾಲಕರೇ ಅಷ್ಟೊಂದು ಜ್ಞಾನವಂತರಾಗಿದ್ದರೆ, ಇನ್ನು ಬೋಧಕರು ಹೇಗಿದ್ದರು ಎಂಬುದು ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಕೆ.ಆರ್.ನಗರದ ಯಡತೊರೆ ಯೋಗನಾಂದೇಶ್ವರ ಸರಸ್ವತಿ ಮಠದ ಶಂಕರಭಾರತಿ ಸ್ವಾಮೀಜಿ, ಬ್ರಹ್ಮಾನಂದಭಾರತೀ ಸ್ವಾಮೀಜಿ, ಗೋಕುಲ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರು ಡಾ.ಎಂ.ಆರ್.ಜಯರಾಮ್ ಮತ್ತಿತರರು ಉಪಸ್ಥಿತರಿದ್ದರು.