ಫೆಲೆಸ್ತೀನೀಯರ ಕುರಿತ ಇಸ್ರೇಲ್ ಸಚಿವರ ಹೇಳಿಕೆಗೆ ವಿಶ್ವಸಂಸ್ಥೆ ಖಂಡನೆ

ಜೆರುಸಲೇಂ, ಮಾ.5: ಫೆಲೆಸ್ತೀನೀಯರ ಕುರಿತು ಇಸ್ರೇಲ್‍ನ ಕಟ್ಟಬಲಪಂಥೀಯ ಸಚಿವ ಬೆಝಲೆಲ್ ಸ್ಮೊಟ್ರಿಚ್ ನೀಡಿರುವ ಹೇಳಿಕೆಗೆ ಅಂತರಾಷ್ಟ್ರೀಯ ಸಮುದಾಯದಿಂದ ವ್ಯಾಪಕ ಆಕ್ರೋಶ, ಟೀಕೆ ವ್ಯಕ್ತವಾಗುತ್ತಿದ್ದಂತೆಯೇ, ಸಚಿವರು ಈ ರೀತಿಯ ಅನುಚಿತ ಹೇಳಿಕೆ ನೀಡಬಾರದಿತ್ತು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತಿಕ್ರಿಯಿಸಿದ್ದಾರೆ.
ವಿತ್ತಸಚಿವರಾಗಿರುವ ಸ್ಮೊಟ್ರಿಚ್, ಎರಡು ದಿನದ ಹಿಂದೆ ಸುದ್ಧಿಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಸಂದರ್ಭ ಆಕ್ರಮಿತ ಪಶ್ಚಿಮ ದಂಡೆಯಲ್ಲಿರುವ ಫೆಲೆಸ್ತೀನೀಯರ ಗ್ರಾಮ ಹವಾರಾದಲ್ಲಿ ಇಸ್ರೇಲಿಯನ್ನರ ವಿರುದ್ಧ ನಡೆದ ದಾಳಿಯ ಕುರಿತ ಪ್ರಶ್ನೆಗೆ ` ಆ ಹವಾರಾ ನಗರವನ್ನೇ ಅಳಿಸಿ ಹಾಕುವ ಅಗತ್ಯವಿದೆ ಎಂದು ನನಗನಿಸುತ್ತದೆ' ಎಂದಿದ್ದರು.
ಈ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಸಚಿವರ ಬೇಜವಾಬ್ದಾರಿಯ, ಅಸಹ್ಯಕರ ಮತ್ತು ಅಸಂಗತ ಹೇಳಿಕೆಯನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿರಸ್ಕರಿಸಬೇಕು ಮತ್ತು ನಿರಾಕರಿಸಬೇಕು ಎಂದು ಅಮೆರಿಕದ ವಿದೇಶಾಂಗ ಇಲಾಖೆ ಆಗ್ರಹಿಸಿತ್ತು. ಇದೀಗ ನೆತನ್ಯಾಹು ತಮ್ಮ ಸಚಿವರ ಹೇಳಿಕೆ `ಅನುಚಿತ' ಎಂದಿದ್ದರೂ, ಹೇಳಿಕೆಯನ್ನು ಖಂಡಿಸಲಿಲ್ಲ. ಫೆಬ್ರವರಿ 26ರಂದು ಹವಾರಾ ನಗರದಲ್ಲಿ ಫೆಲೆಸ್ತೀನೀಯರ ಹಿಂಸಾಚಾರದಲ್ಲಿ ಇಬ್ಬರು ಇಸ್ರೇಲಿ ಸಹೋದರರ ಹತ್ಯೆ ಘಟನೆಗೆ ವಿದೇಶೀ ಶಕ್ತಿಗಳು ಗಮನ ನೀಡಿಲ್ಲ ಎಂದು ನೆತನ್ಯಾಹು ಆರೋಪಿಸಿದ್ದಾರೆ. `ಬಾಯ್ಮಾತಿನ ವಾಕ್ಚಾತುರ್ಯದ ಬದಲು, ಹಿಂಸಾಚಾರವನ್ನು ಕಡಿಮೆ ಮಾಡಲು, ಉದ್ವಿಗ್ನತೆಯನ್ನು ಕಡಿಮೆಗೊಳಿಸುವತ್ತ ನಾವೆಲ್ಲರೂ ಗಮನ ಹರಿಸಬೇಕಾಗಿದೆ. ತಾವು ಆಡಿದ ಪದ ಸೂಕ್ತವಾಗಿರಲಿಲ್ಲ ಎಂದು ಒಪ್ಪಿಕೊಂಡಿರುವ ಸ್ಮೊಟ್ರಿಚ್‍ಗೆ ಅಭಿನಂದನೆಗಳು. ಆದರೆ ಇಬ್ಬರು ಇಸ್ರೇಲಿ ಸಹೋದರರ ಹತ್ಯೆಯ ಬಗ್ಗೆ ಫೆಲೆಸ್ತೀನ್ ಅಥಾರಿಟಿ(ಪಿಎ) ಖಂಡಿಸಬೇಕು ಎಂದು ಅಂತರಾಷ್ಟ್ರೀಯ ಸಮುದಾಯ ಒತ್ತಡ ಹೇರಲಿದೆ ಎಂದು ನಿರೀಕ್ಷಿಸುತ್ತೇನೆ' ಎಂದಿದ್ದಾರೆ.
ಈ ಮಧ್ಯೆ, ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿರುವ ಸ್ಮೊಟ್ರಿಚ್, ತಾನು ಬಾಯ್ತಪ್ಪಿನಿಂದ ಸೂಕ್ತವಲ್ಲದ ಪದ ಬಳಕೆ ಮಾಡಿದ್ದೇನೆ. ಇಸ್ರೇಲಿಯನ್ನರ ವಿರುದ್ಧದ ಹಿಂಸಾಚಾರದ ಅಸಮಾಧಾನದಿಂದ ತಪ್ಪಾಗಿ ಮಾತನಾಡಿದ್ದೇನೆ' ಎಂದಿದ್ದಾರೆ.
ಬೆಝಲೆಲ್ ಸ್ಮೊಟ್ರಿಚ್ ಹಿಂಸಾಚಾರ ಪ್ರಚೋದಿಸುವ ಅಕ್ಷಮ್ಯ ಹೇಳಿಕೆ ನೀಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಮುಖ್ಯಸ್ಥರು ಖಂಡಿಸಿದ್ದಾರೆ.
ಸ್ಮೊಟ್ರಿಚ್ ಜತೆ ಅಧಿಕಾರಿಗಳ ಸಭೆಯಿಲ್ಲ: ಶ್ವೇತಭವನ
ಫೆಲೆಸ್ತೀನೀಯರ ನಗರವನ್ನು ಅಳಿಸಿ ಹಾಕಬೇಕು ಎಂಬ ಹೇಳಿಕೆ ನೀಡಿರುವ ಇಸ್ರೇಲ್ ಸಚಿವ ಬೆಝಲೆಲ್ ಸ್ಮೊಟ್ರಿಚ್ ಮುಂದಿನ ವಾರ ಅಮೆರಿಕಕ್ಕೆ ಭೇಟಿ ನೀಡುವಾಗ ಬೈಡನ್ ಆಡಳಿತದ ಅಧಿಕಾರಿಗಳನ್ನು ಭೇಟಿಯಾಗುವ ಕಾರ್ಯಕ್ರಮವಿಲ್ಲ ಎಂದು ಶ್ವೇತಭವನ ಘೋಷಿಸಿದೆ.
ಸಚಿವರಾಗಿ ನೇಮಕಗೊಂಡ ಬಳಿಕ ಅಮೆರಿಕಕ್ಕೆ ಪ್ರಪ್ರಥಮ ಭೇಟಿ ನೀಡಲಿರುವ ಸ್ಮೊಟ್ರಿಚ್, ಈ ಸಂದರ್ಭ ಅಮೆರಿಕದ ವಿತ್ತ ಕಾರ್ಯದರ್ಶಿ ಜೆನ್ ಯೆಲೆನ್ ಸಹಿತ ಇತರ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸುವ ಕಾರ್ಯಕ್ರಮವಿತ್ತು. ಈ ಮಧ್ಯೆ, ಫ್ರಾನ್ಸ್, ಜರ್ಮನಿ, ಜಪಾನ್, ಬ್ರಿಟನ್ ಸೇರಿದಂತೆ 19 ದೇಶಗಳ ರಾಯಭಾರಿಗಳು ಶನಿವಾರ ಹವಾರಾ ನಗರಕ್ಕೆ ಭೇಟಿ ನೀಡಿದ್ದಾರೆ. ಇಸ್ರೇಲ್ ವಿತ್ತಸಚಿವ ಸ್ಮೊಟ್ರಿಚ್ ಅವರ ಹೇಳಿಕೆಯು ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್‍ಪ್ರೈಸ್ ಟ್ವೀಟ್ ಮಾಡಿದ್ದಾರೆ.