ಅಣ್ಣಾಮಲೈ ನಮ್ಮ ಮೇಲೆ ಕಣ್ಗಾವಲು ಇಟ್ಟಿದ್ದಾರೆ: ರಾಜಿನಾಮೆ ನೀಡಿದ ತಮಿಳುನಾಡು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ

ಚೆನ್ನೈ: ತಮಿಳುನಾಡು ಬಿಜೆಪಿ (BJP) ಐಟಿ ವಿಭಾಗದ ಮುಖ್ಯಸ್ಥ ಸಿಟಿಆರ್ ನಿರ್ಮಲ್ ಕುಮಾರ್ (CTR Nirmal Kumar) ಅವರು ರವಿವಾರ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ರಾಜಿನಾಮೆ ನೀಡಿದ ಬೆನ್ನಲ್ಲೇ ಎಐಎಡಿಎಂಕೆ (AIADMK) ಅಧ್ಯಕ್ಷ ಕೆ. ಪಳನಿಸ್ವಾಮಿ ಅವರನ್ನು ಭೇಟಿಯಾದ ಅವರು ಎಐಎಡಿಎಂಕೆಗೆ ಸೇರ್ಪಡೆಗೊಂಡಿದ್ದಾರೆ.
ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ (K Annamalai) ಅವರ ವಿರುದ್ಧ ಹರಿಹಾಯ್ದ ನಿರ್ಮಲ್ ಕುಮಾರ್, ‘ಪಕ್ಷದ ಕಾರ್ಯಕರ್ತರ ಕುರಿತು ರಾಜ್ಯ ನಾಯಕರಿಗೆ ಸ್ವಲ್ಪವೂ ಗೌರವ ಇಲ್ಲ. ಪಕ್ಷದ ಕಾರ್ಯಕರ್ತರ ಮೇಲೆಯೇ ಅಣ್ಣಾಮಲೈ ಅವರು ‘ಕಣ್ಗಾವಲು’ ಇರಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.
ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅಣ್ಣಾಮಲೈ ಅವರ ಆಪ್ತ ಅಮರ್ ಪ್ರಸಾದ್ ರೆಡ್ಡಿ ಅವರು, ಕುಮಾರ್ ಅವರ ‘ಕಣ್ಗಾವಲು’ ಆರೋಪವನ್ನು ಅಲ್ಲಗಳೆದಿದ್ದಾರೆ. ‘ಕುಮಾರ್ ಅವರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ’ ಎಂದಿದ್ದಾರೆ.
ಅದೇ ವೇಳೆ, ನಿರ್ಮಲ್ ಕುಮಾರ್ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಅಣ್ಣಾಮಲೈ, “ನಿಮಗೆ ಒಳ್ಳೆಯದಾಗಲಿ ಸಹೋದರ, ನೀವು ಹೋದಲ್ಲೆಲ್ಲಾ ಯಶಸ್ಸು ಸಿಗಲಿ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಹಾರ ವಲಸಿಗರ ಮೇಲಿನ ದಾಳಿ ಬಗ್ಗೆ ವದಂತಿ: ಡಿಎಂಕೆ ಕಾರಣವೆಂದ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲು







