ಸಂಪ್ಯ | ಎನ್ಐಎ ತಂಡ ಸಂಚರಿಸುತ್ತಿದ್ದ ಪೊಲೀಸ್ ಜೀಪ್–ಬೈಕ್ ಢಿಕ್ಕಿ: ಪಾಣಾಜೆ ಸಿಎ ಬ್ಯಾಂಕ್ ಸಿಇಒ ಮೃತ್ಯು

ಪುತ್ತೂರು, ಮಾ.6: ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತಂಡ ಸಂಚರಿಸುತ್ತಿದ್ದ ಪೊಲೀಸ್ ವಾಹನ ಹಾಗೂ ಬೈಕೊಂದರ ನಡುವೆ ಅಪಘಾತ(Accident) ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ರವಿವಾರ ರಾತ್ರಿ ಪುತ್ತೂರಿನಲ್ಲಿ ನಡೆದಿದೆ.
ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ (Panaje C.A. Bank CEO) ಲಕ್ಷ್ಮಣ ನಾಯ್ಕ ಬಿ. (50) ಮೃತಪಟ್ಟವರಾಗಿದ್ದಾರೆ.
ಮಾಣಿ-ಮೈಸೂರು ರಸ್ತೆಯ ಆರ್ಯಾಪು ಗ್ರಾಮದ ಸಂಪ್ಯ ಎಂಬಲ್ಲಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ರವಿವಾರ ರಾತ್ರಿ ವಿಶೇಷ ತನಿಖೆಯ ದೃಷ್ಟಿಯಿಂದ ಸಂಚರಿಸುತ್ತಿದ್ದ ಎನ್.ಐ.ಎ. ತಂಡದ ಪೊಲೀಸ್ ವಾಹನ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ.
ಪೊಲೀಸ್ ವಾಹನ ಜಿಲ್ಲೆಯ ಡಿ.ಆರ್.ಗೆ ಸೇರಿದ್ದಾಗಿದ್ದು, ಸುಳ್ಯ ಕಡೆಯಿಂದ ಪುತ್ತೂರಿಗೆ ಆಗಮಿಸುತ್ತಿದ್ದರೆ, ಲಕ್ಷ್ಮಣ್ ಅವರು ಪುತ್ತೂರಿನಿಂದ ಆರ್ಲಪದವು ಕಡೆಗೆ ಹೋಗುತ್ತಿದ್ದಾಗ ಮುಖಾಮುಖಿ ಢಿಕ್ಕಿಯಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





