ಭಾರತದ ಸಾಂದರ್ಭಿಕ ಆರ್ಥಿಕ ಹಿಂಜರಿತದ ಕುರಿತು ಆತಂಕವಾಗುತ್ತಿದೆ: ರಘುರಾಮ್ ರಾಜನ್

ಹೊಸದಿಲ್ಲಿ: ಮೂರನೆಯ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ಮತ್ತಷ್ಟು ಮಂದವಾಗಿರುವುದರಿಂದ ನಾನು ಆತಂಕಗೊಂಡಿದ್ದೇನೆ ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಮ್ ರಾಜನ್ (Raghuram Rajan) ಹೇಳಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಂಗಳವಾರ ಸರ್ಕಾರ ಬಿಡುಗಡೆ ಮಾಡಿದ್ದ ದತ್ತಾಂಶದ ಪ್ರಕಾರ, ಜುಲೈನಿಂದ ಸೆಪ್ಟೆಂಬರ್ ತಿಂಗಳ ಎರಡನೆ ತ್ರೈಮಾಸಿಕ ಅವಧಿಯಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ದರವು ಶೇ. 6.3 ಇದ್ದದ್ದು, ಅಕ್ಟೋಬರ್‌ನಿಂದ ಡಿಸೆಂಬರ್ ತಿಂಗಳ ಮೂರನೆ ತ್ರೈಮಾಸಿಕದಲ್ಲಿ ಶೇ. 4.4ಕ್ಕೆ ಕುಂಠಿತಗೊಂಡಿದೆ. ಹೀಗಿದ್ದೂ, 2021-22ರಲ್ಲಿ ಅಂದಾಜಿಸಲಾಗಿದ್ದ ಶೇ. 8.7 ಬೆಳವಣಿಗೆ ದರವನ್ನು ಶೇ. 9.1ಕ್ಕೆ ಪರಿಷ್ಕರಿಸಿದ್ದ ಸರ್ಕಾರವು, 2022-23ರಲ್ಲಿ ಶೇ. 7ರ ಬೆಳವಣಿಗೆ ದರದ ಮುನ್ನೋಟವನ್ನು ಉಳಿಸಿಕೊಂಡಿದೆ.
ಈ ಕುರಿತು PTI ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ರಘುರಾಮ್ ರಾಜನ್, "ಹಿಂದಿನ ಜಿಡಿಪಿ ಬೆಳವಣಿಗೆ ದರವನ್ನು ಮೇಲ್ಮುಖವಾಗಿ ಪರಿಷ್ಕರಿಸಲಾಗಿದೆ ಎಂಬ ಆಶಾವಾದಿಗಳ ಮಾತನ್ನು ಖಂಡಿತ ಒಪ್ಪಬಹುದಾದರೂ, ನಾನು ಸಾಂದರ್ಭಿಕ ಆರ್ಥಿಕತೆ ಮಂದವಾಗಿರುವುದರ ಕುರಿತು ಕಳವಳಗೊಂಡಿದ್ದೇನೆ" ಎಂದು ಹೇಳಿದ್ದಾರೆ. "ಖಾಸಗಿ ವಲಯದವರು ಹೂಡಿಕೆ ಮಾಡಲು ಇಚ್ಛಿಸುತ್ತಿಲ್ಲ, ಆರ್‌ಬಿಐ ಈಗಲೂ ಬಡ್ಡಿ ದರ ಏರಿಕೆಯನ್ನು ಮುಂದುವರಿಸಿದೆ, ಮುಂದಿನ ವರ್ಷಗಳಲ್ಲಿ ಜಾಗತಿಕ ಬೆಳವಣಿಗೆ ಕುಂಠಿತಗೊಳ್ಳುವ ಸಾಧ್ಯತೆ ಇದೆ, ಹೀಗಿರುವಾಗ ಹೆಚ್ಚುವರಿ ಬೆಳವಣಿಗೆಯ ವೇಗವನ್ನು ಎಲ್ಲಿಂದ ಸಾಧಿಸಲಾಗುತ್ತದೆ ಎಂಬ ಬಗ್ಗೆ ನನಗೆ ಖಚಿತತೆ ಇಲ್ಲ" ಎಂದೂ ತಿಳಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ 2022-23ನೇ ನಾಲ್ಕನೆ ತ್ರೈಮಾಸಿಕದ ಬೆಳವಣಿಗೆ ದರವನ್ನು ಶೇ. 4.2ಕ್ಕೆ ನಿಗದಿಗೊಳಿಸಿರುವುದರಿಂದ ನನ್ನ ಕಳವಳ ತಪ್ಪಾಗಿರಲು ಸಾಧ್ಯವಿಲ್ಲ ಎಂದು ಖ್ಯಾತ ಅರ್ಥಶಾಸ್ತ್ರಜ್ಞರೂ ಆದ ರಘುರಾಮ್ ರಾಜನ್ ಅಭಿಪ್ರಾಯ ಪಟ್ಟಿದ್ದಾರೆ.
"ಈ ಹಂತದಲ್ಲಿ ಅಕ್ಟೋಬರ್-ಡಿಸೆಂಬರ್ ಸಾಲಿನ ಸರಾಸರಿ ವಾರ್ಷಿಕ ಬೆಳವಣಿಗೆಯು ಕೊರೋನ ಸಾಂಕ್ರಾಮಿಕ ಪೂರ್ವದ ಮೂರು ವರ್ಷಗಳ ಹಿಂದಿದ್ದ ಶೇ. 3.7ರಷ್ಟಿದೆ. ಇದು ಅಪಾಯಕಾರಿಯಾಗಿ ಹಳೆಯ ಹಿಂದೂ ಬೆಳವಣಿಗೆಯ ಸಮೀಪವಿದೆ. ನಾವು ಮತ್ತಷ್ಟು ಉತ್ತಮ ಪ್ರಗತಿ ಸಾಧಿಸಬೇಕು" ಎಂದು ಹೇಳಿದ್ದಾರೆ.
ಭಾರತೀಯ ಅರ್ಥಶಾಸ್ತ್ರಜ್ಞ ರಾಜ್ ಕೃಷ್ಣ ಪ್ರಪ್ರಥಮ ಬಾರಿಗೆ 1978ರಲ್ಲಿ "ಹಿಂದೂ ಬೆಳವಣಿಗೆ ದರ" ಎಂಬ ಪದವನ್ನು 1950ರಿಂದ 1980ರ ನಡುವಿನ ಆರ್ಥಿಕ ಬೆಳವಣಿಗೆಯ ಮಂದಗತಿಯನ್ನು ವ್ಯಾಖ್ಯಾನಿಸಲು ಬಳಸಿದ್ದರು.
ಇದನ್ನೂ ಓದಿ: H3N2 ಹಾವಳಿ | ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಆರೋಗ್ಯ ಸಿಬ್ಬಂದಿಗೆ ಮಾಸ್ಕ್ ಕಡ್ಡಾಯ







