ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ವಿಶ್ವದ 5 ಪ್ರಮುಖ ವಿಶ್ವವಿದ್ಯಾಲಯಗಳ ಪೈಕಿ ನಾಲ್ಕನ್ನು ಮುನ್ನಡೆಸಲಿರುವ ಮಹಿಳೆಯರು

ಹೊಸದಿಲ್ಲಿ: ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ವಿಶ್ವದ ಐದು ಪ್ರಮುಖ ವಿಶ್ವವಿದ್ಯಾಲಯಗಳ ಪೈಕಿ ನಾಲ್ಕು ವಿಶ್ವವಿದ್ಯಾಲಯಗಳಾದ ಆಕ್ಸ್‌ಫರ್ಡ್ (Oxford), ಹಾರ್ವರ್ಡ್ (Harvard), ಕೇಂಬ್ರಿಡ್ಜ್ (Cambridge) ಹಾಗೂ ಮೆಸಾಚುಸೆಟ್ಸ್ ತಾಂತ್ರಿಕ ವಿದ್ಯಾಲಯವನ್ನು MIT) ಮಹಿಳೆಯರು ಮುನ್ನಡೆಸಲಿದ್ದಾರೆ. 2023ರ ಟೈಮ್ಸ್ ಉನ್ನತ ಶಿಕ್ಷಣ ಜಾಗತಿಕ ವಿಶ್ವವಿದ್ಯಾಲಯಗಳ ಶ್ರೇಯಾಂಕದ ಪ್ರಕಾರ, ಈ ವರ್ಷದ ಜುಲೈ ವೇಳೆಗೆ ಈ ಸಾಧ್ಯತೆ ನಿಜವಾಗಲಿದೆ ಎಂದು indianexpress.com ವರದಿ ಮಾಡಿದೆ.
ಜಾಗತಿಕ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿರುವ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವನ್ನು ಪ್ರಸ್ತುತ ಐರೀನ್ ಟ್ರೇಸಿ ಮುನ್ನಡೆಸುತ್ತಿದ್ದು, ಹಾರ್ವರ್ಡ್ ವಿಶ್ವವಿದ್ಯಾಲಯದ (ಎರಡನೆ ಶ್ರೇಯಾಂಕ) ಕ್ಲಾಡಿನ್ ಗೇ ಹಾಗೂ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ (ಜಂಟಿ ಮೂರನೇ ಶ್ರೇಯಾಂಕ) ಡೆಬೊರಾಹ್ ಪ್ರೆಂಟಿಸ್ ಇಬ್ಬರೂ ಜುಲೈ ತಿಂಗಳಲ್ಲಿ ಮುಖ್ಯಸ್ಥರಾಗಲಿದ್ದಾರೆ. ಮೆಸಾಚುಸೆಟ್ಸ್ ತಾಂತ್ರಿಕ ವಿದ್ಯಾಲಯದ (ಐದನೇ ಶ್ರೇಯಾಂಕ) ಸ್ಯಾಲಿ ಕಾರ್ನ್‌ಬ್ಲೂತ್ ಸದ್ಯ ಅದರ ಮುಖ್ಯಸ್ಥರಾಗಿದ್ದಾರೆ.
2023ರ ಜಾಗತಿಕ ವಿಶ್ವವಿದ್ಯಾಲಯಗಳ ಶ್ರೇಯಾಂಕದ ಪ್ರಕಾರ, ಜಗತ್ತಿನ 200 ಪ್ರಮುಖ ವಿಶ್ವವಿದ್ಯಾಲಯಗಳ ಪೈಕಿ 48 ವಿಶ್ವವಿದ್ಯಾಲಯಗಳಿಗೆ ಮಹಿಳಾ ಉಪಾಧ್ಯಕ್ಷೆ ಅಥವಾ ಮಹಿಳಾ ಉಪ ಕುಲಪತಿಗಳನ್ನು ಹೊಂದಿವೆ. ಕಳೆದ ವರ್ಷ 43ರಷ್ಟಿದ್ದ ಈ ಪ್ರಮಾಣ ಇದೀಗ ಈ ಹಂತಕ್ಕೆ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಈ ಪ್ರಮಾಣ ಶೇ. 12ರಷ್ಟು ಏರಿಕೆಯಾಗಿದ್ದರೆ, ಕಳೆದ ಐದು ವರ್ಷಗಳಲ್ಲಿ ಶೇ. 41ರಷ್ಟು ಏರಿಕೆಯಾಗಿದೆ.
ಈ ಏರಿಕೆಯು ಅಮೆರಿಕಾ ಹಾಗೂ ಜರ್ಮನಿಯಲ್ಲಿ ಆಗಿರುವ ನೇಮಕಾತಿಗಳ ಏರಿಕೆಯಿಂದಾಗಿರುವ ಫಲಿತಾಂಶವಾಗಿದೆ. ದತ್ತಾಂಶದ ಪ್ರಕಾರ, ಅಮೆರಿಕಾದ ಪ್ರಮುಖ 200 ವಿಶ್ವವಿದ್ಯಾಲಯಗಳ ಪೈಕಿ ಅತಿ ಹೆಚ್ಚು ಮುಖ್ಯಸ್ಥರ ಹುದ್ದೆಯಲ್ಲಿ ಮಹಿಳೆಯರಿದ್ದಾರೆ (58ರ ಪೈಕಿ 16). ಇದರೊಂದಿಗೆ, 200 ಪ್ರಮುಖ ವಿಶ್ವವಿದ್ಯಾಲಯಗಳ ಪೈಕಿ ಶೇ. 2.5ರಷ್ಟು ಮುಖ್ಯಸ್ಥರ ಹುದ್ದೆಯಲ್ಲಿ (ಅಥವಾ ಮಹಿಳಾ ಮುಖ್ಯಸ್ಥರಿರುವ ವಿಶ್ವವಿದ್ಯಾಲಯಗಳಲ್ಲಿ ಶೇ. 10ರಷ್ಟು) ಕಪ್ಪುವರ್ಣೀಯ ಮಹಿಳೆಯರಿದ್ದಾರೆ.
ಇದನ್ನೂ ಓದಿ: ಭಾರತದ ಸಾಂದರ್ಭಿಕ ಆರ್ಥಿಕ ಹಿಂಜರಿತದ ಕುರಿತು ಆತಂಕವಾಗುತ್ತಿದೆ: ರಘುರಾಮ್ ರಾಜನ್