ಎಸ್‌ಎಸ್‌ಎಫ್ ವತಿಯಿಂದ ಉಚಿತ ವೃತ್ತಿ ಮಾರ್ಗದರ್ಶನ, ಪ್ರೇರಣಾ ಶಿಬಿರ

ಕುಂದಾಪುರ: ಸುನ್ನಿ ಸ್ಟೂಡೆಂಟ್ ಫೆಡರೇಶನ್(ಎಸ್‌ಎಸ್‌ಎಫ್) ಗಂಗೊಳ್ಳಿ ಶಾಖೆ ವತಿಯಿಂದ 8ನೆ ತರಗತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ವೃತ್ತಿ ಮಾರ್ಗದರ್ಶನ, ಪ್ರೇರಣಾ ಶಿಬಿರ ಮತ್ತು ವಿದ್ಯಾರ್ಥಿವೇತನ ಜಾಗೃತಿ ಕಾರ್ಯಕ್ರಮ ರವಿವಾರ ಗಂಗೊಳ್ಳಿಯ ಸುಲ್ತಾನ್ ಮೊಹಲ್ಲಾದಲ್ಲಿರುವ ಬಿಷಾರತುಲ್ ಅರೇಬಿಕ್ ಮದ್ರಸದಲ್ಲಿ ಜರುಗಿತು.
ಪುತ್ತೂರಿನ ಕಮ್ಯೂನಿಟಿ ಸೆಂಟರಿನ ಪ್ರಧಾನ ಕಾರ್ಯದರ್ಶಿ ಮತ್ತು ಶೈಕ್ಷಣಿಕ ಮಾರ್ಗದರ್ಶಕ ಹನೀಫ್ ಪುತ್ತೂರು ಹಾಗೂ ಸೆಂಟರಿನ ನುರಿತ ಕೌನ್ಸಿಲರ್ ಇಮ್ತಿಯಾಝ್ ಪುತ್ತೂರು ವಿದ್ಯಾರ್ಥಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿ, ವೃತ್ತಿ ಮಾರ್ಗದರ್ಶನ, ಕೌನ್ಸಿಲಿಂಗ್, ಜಾಗತಿಕ ಅವಕಾಶಗಳು, ಭವಿಷ್ಯದ ಬೆದರಿಕೆ ಮತ್ತು ತಯಾರಿಯ ಕುರಿತಂತೆ ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಗಂಗೊಳ್ಳಿ ಜಮತುಲ್ ಮುಸ್ಲಿಮೀನ್ ಕಮಿಟಿಯ ಅಧ್ಯಕ್ಷ ಪಿ.ಎಂ.ಹಸೈನಾರ್, ಸುಲ್ತಾನ್ ಮೊಹಲ್ಲಾ ಮಸೀದಿಯ ಇಮಾಮ್ ಷರೀಫ್ ಸಹದಿ ಉಸ್ತಾದ್, ಸುನ್ನಿ ಸ್ಟೂಡೆಂಟ್ ಫೆಡರೇಶನ್ ಗಂಗೊಳ್ಳಿ ಘಟಕದ ಅಧ್ಯಕ್ಷ ಅಶಿಮ್ ಗಂಗೊಳ್ಳಿ ಹಾಗೂ ಹೆಲ್ಫ್‌ಲೈನ್ ಅಸೋಸಿಯೇಟ್ಸ್ ಮಾಲಕ ಝಹೀರ್ ನಾಖುದಾ ಉಪಸ್ಥಿತರಿದ್ದರು.