ಹಾಸನ | ಪ್ರವಾಸಕ್ಕೆಂದು ಕರೆದೊಯ್ದು ರೌಡಿಶೀಟರ್ ಹತ್ಯೆ: ಇಬ್ಬರು ಆರೋಪಿಗಳ ಬಂಧನ

ಹಾಸನ: ರೌಡಿಶೀಟರ್‌ನನ್ನು ಜೊತೆಯಲ್ಲಿದ್ದ ಸ್ನೇಹಿತರೇ ಕೊಲೆ ಮಾಡಿ ಗುಂಡಿ ತೆಗೆದು ಹೂತು ಹಾಕಿರುವ ಘಟನೆ ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಸಂತೋಷ್ (36) ಅಲಿಯಾಸ್ ಪುಲ್ಲಿ ಕೊಲೆಯಾದ ರೌಡಿಶೀಟರ್. ಪುಲ್ಲಿಯ ರೈಟ್ ಹ್ಯಾಂಡ್ ಆಗಿದ್ದ ಪ್ರೀತಮ್‍ಗೌಡ (25) ಹಾಗೂ ಸ್ನೇಹಿತ ಕೀರ್ತಿ ಕೊಲೆ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಇಂದು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಎಎಸ್ಪಿತಮ್ಮಯ್ಯ, ಫೆ.10 ರಂದು ರಾತ್ರಿ ಚಿಕ್ಕಮಗಳೂರಿಗೆ ಪ್ರವಾಸಕ್ಕೆಂದು ಕರೆದೊಯ್ದು ದಟ್ಟ ಅರಣ್ಯ ಪ್ರದೇಶದಲ್ಲಿ ಮೂವರು ಮದ್ಯ ಸೇವಿಸಿ ಮತ್ತಿನಲ್ಲಿದ್ದ ವೇಳೆ ಪುಲ್ಲಿಯನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಕುರುವಂಗಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಗುಂಡಿ ತೆಗೆದು ಹೂತು ಹಾಕಿ ವಾಪಸ್ ಮನೆಗೆ ಬಂದಿದ್ದರು. ಪುಲ್ಲಿ ನಾಪತ್ತೆಯಾಗಿ ಹದಿನೈದು ದಿನಗಳ ನಂತರ ಆತನ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ವೇಳೆ ಆರೋಪಿಗಳು ಕೊಲೆ ವಿಚಾರ ಬಾಯ್ಬಿಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.