ಉಡುಪಿ: ಜಿಲ್ಲಾ ವೈದ್ಯಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ

ಉಡುಪಿ: ಮಣಿಪಾಲ ಕೆಎಂಸಿಯ ಸಮುದಾಯ ವೈದ್ಯಕೀಯ ವಿಭಾಗ ಮತ್ತು ಉಡುಪಿ ಜಿಲ್ಲಾ ರೋಗ ಸರ್ವೇಕ್ಷಣಾಧಿಕಾರಿಗಳ ಕಚೇರಿ ಜಂಟಿಯಾಗಿ ಅಸಾಂಕ್ರಮಿಕ ರೋಗಗಳ (ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್,ಉಪಶಮನ ಚಿಕಿತ್ಸೆಗಳು) ತಪಾಸಣೆ, ತಡೆಗಟ್ಟುವಿಕೆ ಮತ್ತು ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲೆಯ ಸುಮಾರು 90ಕ್ಕೂ ಅಧಿಕ ವೈದ್ಯಾಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಕೆಎಂಸಿ ಕಾಲೇಜಿನ ಸಭಾಂಗಣ ದಲ್ಲಿ ಆಯೋಜಿಸಿತ್ತು.
ಕಾರ್ಯಾಗಾರವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ್ ಉಡುಪ ಮಾತನಾಡಿ, ಸಮುದಾಯದಲ್ಲಿ ಹೆಚ್ಚುತ್ತಿರುವ ಜೀವನ ಶೈಲಿಗೆ ಸಂಬಂಧಿಸಿದ ಕಾಯಿಲೆಗಳ ನಿರ್ವಹಣೆ ಬಗ್ಗೆ ತುರ್ತು ಕ್ರಮಗಳ ಅಗತ್ಯತೆಯನ್ನು ವಿವರಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ ಶಾಸ್ತ್ರಿ, ಸಮುದಾಯದಲ್ಲಿರುವ ವಿವಿಧ ಅಸಾಂಕ್ರಮಿಕ ಕಾಯಿಲೆಗಳ ಕುರಿತು ವಿವರಿಸಿ ಅವುಗಳನ್ನು ನಿರ್ವಹಿಸುವ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದರು. ಅವುಗಳನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಲು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಕೆಎಂಸಿ ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್ ಕಾರ್ಯಕ್ರಮದ ವಿವರಣೆ ನೀಡಿ ಸೇವೆಯಲ್ಲಿರುವ ವೈದ್ಯರು ಗಳಿಗಾಗಿ ಪದೇ ಪದೇ ಇಂತಹ ಜ್ಞಾನ ಹಾಗೂ ಕೌಶಲ್ಯ ಗುಣಮಟ್ಟದ ನವೀಕರಣದ ಅಗತ್ಯತೆ ಬಗ್ಗೆ ವಿವರಿಸಿದರು.
ಪ್ರತೀ ಅರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿರಬಹುದಾದ ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ರೋಗಗಳ ಅಂಕಿ ಅಂಶಗಳು ಮತ್ತು ಅಂತಹ ರೋಗಗಳನ್ನು ಶೀಘ್ರ ಪತ್ತೆ ಮಾಡಿ ಚಿಕಿತ್ಸೆ ಮಾಡಬೇಕಾದ ಅಗತ್ಯತೆ ಹಾಗೂ ಅದಕ್ಕೆ ಬೇಕಾದ ಮಾನವ ಸಂಪನ್ಮೂಲಗಳ ಬಗ್ಗೆ ಡಾ.ಕುಮಾರ್ ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಶಶಿಕಿರಣ್ (ಫಿಸಿಶಿಯನ್),ಡಾ.ಸಹನಾ ಶೆಟ್ಟಿ (ಮಧುಮೇಹ ತಜ್ಞೆ), ಡಾ ಮುಕುಂದ್ ಪ್ರಭು (ಹೃದಯ ತಜ್ಞರು), ಡಾ ಅರವಿಂದ್ ಪ್ರಭು (ನರರೋಗ ತಜ್ಞರು), ಡಾ ಮೈತ್ರೈ(ದೈಹಿಕ ದೌರ್ಬಲ್ಯ ಮತ್ತು ಪುನರ್ವಸತಿ ತಜ್ಞೆ), ಡಾ. ವರಶ್ರೀ ಬಿ.ಎಸ್.(ಪ್ರಯೋಗಾಲಯ ತಜ್ಞೆ), ಡಾ. ಮುರಳಿಧರ್ ಕುಲಕರ್ಣೆ, ಡಾ ರಂಜಿತಾ ಶೆಟ್ಟಿ (ಸಮುದಾಯ ಆರೋಗ್ಯ) ಭಾಗವಹಿಸಿದ್ದರು.
ಡಾ.ಅಫ್ರಾಝ್ ಮತ್ತು ಡಾ.ಅಂಜಲಿ ಕಾರ್ಯಕ್ರಮ ನಿರ್ವಹಿಸಿದರು.