ಸಚಿವ ಸುನಿಲ್ ಕುಮಾರ್ ಟೆಂಡರ್ ಬಿಡುಗಡೆಗಾಗಿ ಶೇ.3 ಕಮಿಷನ್ ಪಡೆಯುತ್ತಿದ್ದಾರೆ: ಮುತಾಲಿಕ್ ಆರೋಪ
"ನಿರುದ್ಯೋಗಿ ಬಿಜೆಪಿ ಕಾರ್ಯಕರ್ತನ ಬಳಿ 4 ಕೋಟಿ ರೂ. ಹಣ ಎಲ್ಲಿಂದ ಬಂತು"
ಕಾರ್ಕಳ: ಹೆಬ್ರಿ ತಾಲೂಕಿನ ಶಿವಪುರದಲ್ಲಿನ ಬೇನಾಮಿ ಆಸ್ತಿ ಪ್ರಕರಣದ ತನಿಖೆ ನಡೆಸಲು ಲೋಕಾಯುಕ್ತರು ಮೀನಮೇಷ ಎಣಿಸಿದರೆ ಲೋಕಯುಕ್ತ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಕಾರ್ಕಳ ಪರಪು ಸಮೀಪದ ಪಾಂಚಜನ್ಯಾ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಪುರ ಕೆರೆಬೆಟ್ಟುನಲ್ಲಿರುವ ಜಮೀನನ್ನು ಬಿಜೆಪಿ ಕಾರ್ಯಕರ್ತ ಗಜಾನಂದ ಹಾಗೂ ವಿದ್ಯಾ ಸುವರ್ಣ ಹೆಸರಿನಲ್ಲಿ ನೋಂದಣಿ ಮಾಡಲಾಗಿದ್ದು 67.94 ಎಕರೆ ಜಮೀನು 4.15ಕೋಟಿ ರೂ.ಗೆ ಖರೀದಿಸಲಾಗಿದೆ. ಈ ಜಮೀನು ಪ್ರಭಾವಿ ಸಚಿವರೊಬ್ಬರ ಬೇನಾಮಿ ಆಸ್ತಿಯಾಗಿದೆ. ಇದರ ವಿರುದ್ಧ ಫೆ.28ರಂದು ಜಿಲ್ಲಾಧಿಕಾರಿಗೆ ಮತ್ತು ಮಾ.2 ರಂದು ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿತ್ತು ಎಂದರು.
ಈ ಜಮೀನನ್ನು ರೈತರನ್ನು ಬೆದರಿಸಿ ಹೆದರಿಸಿ ಮೋಸದಿಂದ ಕಡಿಮೆ ಬೆಲೆಗೆ ಖರೀದಿಸಲಾಗಿದೆ. ಬಿಜೆಪಿ ಕಾರ್ಯಕರ್ತ ಗಜಾನಂದ ನಿರುದ್ಯೋಗಿಯಾಗಿದ್ದು ಆತನಲ್ಲಿ ನಾಲ್ಕು ಕೋಟಿ ಹಣ ಎಲ್ಲಿಂದ ಬಂದಿದೆ ಎಂಬುದು ಪ್ರಶ್ನೆಯಾಗಿದೆ. ಈ ಬೇನಾಮಿ ಆಸ್ತಿ ತನಿಖೆಯನ್ನು ಲೋಕಾಯುಕ್ತರು ವೇಗವಾಗಿ ವಹಿಸಿಕೊಂಡು ಸತ್ತಾಸತ್ಯತೆ ಯನ್ನು ಜನತೆಗೆ ತಿಳಿಸಬೇಕು ಎಂದು ಅವರು ಒತ್ತಾಯಿಸಿದರು.
ಮೈಸೂರಿನಲ್ಲಿ ಬಿಡುಗಡೆಯಾದ ಆಡಿಯೋ ಬಗ್ಗೆ ಮಾತನಾಡಿದ ಮುತಾಲಿಕ್, ಸಚಿವ ಸುನಿಲ್ ಕುಮಾರ್ ಟೆಂಡರ್ ಬಿಡುಗಡೆಗಾಗಿ ಶೇ.3 ಕಮಿಷನ್ ಪಡೆಯುತ್ತಿದ್ದು, ಇಂಧನ ಕೆಪಿಟಿಸಿಎಲ್ ಇಲಾಖೆಯಲ್ಲಿ ಕೇವಲ ಒಂದೆ ತಿಂಗಳಲ್ಲಿ ತರಾತುರಿಯಲ್ಲಿ 800 ಕೋಟಿಯ ಟೆಂಡರ್ ಪಾಸ್ ಮಾಡಲಾಗಿದೆ. ಅದರಲ್ಲಿ ಶೇ.3 ಕಮಿಷನ್ ಪಡೆಯುತ್ತಿದ್ದಾರೆ. ಇದರಲ್ಲಿ ಬ್ರಹ್ಮಾಂಡ ಬ್ರಷ್ಟಾಚಾರವೆ ಅಡಗಿದೆ ಎಂದು ದೂರಿದರು.
ಕೋವಿಡ್ ಸಮಯದಲ್ಲಿ 5000 ಕಟ್ಟಡ ಕೂಲಿ ಕಾರ್ಮಿಕರಿಗೆ ಬಿಡುಗಡೆ ಮಾಡಲಾದ ಕಿಟ್ ಅನ್ನು ಕಾರ್ಮಿಕರಿಗೆ ಒದಗಿಸದೆ ಅನ್ಯಾಯವೆಸಗಿರುವುದು ಎಲ್ಲರಿಗೂ ತಿಳಿದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹಗರಣಗಳನ್ನು ಬಯಲಿಗೆ ತರಲಾಗುವುದು. ರಾಜ್ಯದ ಮಂತ್ರಿಗಳು ಹಗರಣದಲ್ಲೆ ಮುಳುಗಿದ್ದಾರೆ. ನನ್ನ ಹೋರಾಟ ಭ್ರಷ್ಟಾಚಾರ ವಿರುದ್ಧವಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಕೀಲ ಹರೀಶ್ ಅಧಿಕಾರಿ, ಪುರಸಭಾ ಸದಸ್ಯ ಲಕ್ಷ್ಮಿ ನಾರಾಯಣ ಮಲ್ಯ, ನಿಟ್ಟೆ ಗ್ರಾಪಂ ಸದಸ್ಯ ಸುಹಾಸ್ ಹೆಗ್ಡೆ, ಮಹಿಳಾ ಪ್ರತಿನಿಧಿ ದಿವ್ಯಾ ಉಪಸ್ಥಿತರಿದ್ದರು.