ಮೂಡಿಗೆರೆ | ನಾಪತ್ತೆಯಾಗಿದ್ದ ಮಹಿಳೆ ಮೃತದೇಹ ಪತ್ತೆ; ಪತಿಯ ಆತ್ಮಹತ್ಯೆ ಪ್ರಕರಣಕ್ಕೆ ತಿರುವು
ಮೂಡಿಗೆರೆ, ಮಾ.6: ತಾಲೂಕಿನ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಉಗ್ಗೇಹಳ್ಳಿ ಗ್ರಾಮದಲ್ಲಿ 3 ದಿನದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ಜಗದೀಶ್ ಆಚಾರ್ ಅವರ ಪತ್ನಿ ನೇತ್ರಾ ಅವರ ಶವ ಸೋಮವಾರ ಕಾಫಿ ತೋಟವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇತ್ತೀಚೆಗೆ ಕಳೆನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದ ಜಗದೀಶ್ ಆಚಾರ್ ಚಿಕಿತ್ಸೆ ಫಲಕಾರಿಯಾಗದೇ ಮಾ.3ರಂದು ಕೊನೆಯುಸಿರೆಳೆದಿದ್ದರು. ಈ ಬಗ್ಗೆ ಗೋಣಿಬೀಡು ಠಾಣೆಗೆ ದೂರು ನೀಡಿದ್ದ ಜಗದೀಶ್ ಆಚಾರ್ ತಾಯಿ ಯಶೋಧಮ್ಮ, ನನ್ನ ಮಗನ ಸಾವಿಗೆ ಆತನ ಹೆಂಡತಿ ನೇತ್ರಾ ಮತ್ತು ಆಕೆಯ ಪ್ರಿಯಕರ ಧನಂಜಯ ಅವರ ನಡುವಿನ ಅಕ್ರಮ ಸಂಬಂಧವೇ ಕಾರಣ. ಘಟನೆಯಿಂದ ಮನನೊಂದು ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದ್ದರಿಂದ ನೇತ್ರಾ ಮತ್ತು ಧನಂಜಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಗೋಣಿಬೀಡು ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು.
ತನ್ನ ವಿರುದ್ಧ ಗಂಡನ ಕುಟುಂಬದವರು ದೂರು ನೀಡುತ್ತಿರುವ ಸುಳಿವರಿತ ನೇತ್ರಾ ಮಾ.3ರಂದು ರಾತ್ರಿ ಮನೆಯಿಂದ ಇದ್ದಕ್ಕಿದಂತೆ ನಾಪತ್ತೆಯಾಗಿದ್ದರು. ಸೋಮವಾರ ಬೆಳಿಗ್ಗೆ ನೇತ್ರಾ ಶವ ಮನೆಯಿಂದ ಸ್ವಲ್ಪ ದೂರದಲ್ಲಿರುವ ಕಾಫಿ ತೋಟದಲ್ಲಿ ಕಾಫಿ ಗಿಡವೊಂದಕ್ಕೆ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.
ಉಗ್ಗೇಹಳ್ಳಿ ಗ್ರಾಮದ ಕೃಷಿಕ ಜಗದೀಶ್ ಆಚಾರ್ ಮತ್ತು ಸಕಲೇಶಪುರ ತಾಲೂಕಿನ ಮಳಲಿ ಗ್ರಾಮದ ನೇತ್ರಾ 13 ವರ್ಷದ ಹಿಂದೆ ವಿವಾಹವಾಗಿದ್ದರು. ದಂಪತಿಗಳಿಗೆ ಒಂದು ಗಂಡು ಒಂದು ಹೆಣ್ಣು ಮಕ್ಕಳಿವೆ. ಇದೀಗ ದಂಪತಿಗಳಿಬ್ಬರು ಸಾವನ್ನಪ್ಪಿದ್ದು ಚಿಕ್ಕ ಮಕ್ಕಳಿಬ್ಬರು ತಬ್ಬಲಿಯಾಗಿದ್ದಾರೆ.