ಕಾನೂನು ವಿವಿ ಪ್ರವೇಶಾತಿಯಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಸೀಟುಗಳ ವಂಚನೆ: ರಮೇಶ್ ಬಾಬು ಆರೋಪ
ಬೆಂಗಳೂರು, ಮಾ. 6: ರಾಷ್ಟ್ರೀಯ ಕಾನೂನು ವಿವಿಯಲ್ಲಿ ರಾಜ್ಯದ ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಉಪಕುಲಪತಿಗಳು ಶೇ.25ರಷ್ಟು ಸೀಟುಗಳನ್ನು ವಂಚಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ವಕೀಲ ರಮೇಶ್ ಬಾಬು ಆರೋಪಿಸಿದ್ದಾರೆ.
ಸೋಮವಾರ ಈ ಕುರಿತು ಮಾಧ್ಯಮ ಪ್ರಕಟನೆ ನೀಡಿರುವ ಅವರು, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಕಾಯ್ದೆಯಡಿ ಬರುವ ಈ ವಿವಿಗೆ ರಾಜ್ಯ ಸರಕಾರವು 23 ಎಕರೆ ಜಾಗವನ್ನು ನೀಡಿ ಮೂಲಸೌಕರ್ಯಗಳನ್ನು ಒದಗಿಸಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಈ ವಿವಿಯ ಕುಲಪತಿಗಳಾಗಿದ್ದು, ವಿಶ್ವವಿದ್ಯಾಲಯದ ಆಡಳಿತ ಮಂಡಳಿಯಲ್ಲಿ ಸರಕಾರದ ಕಾನೂನು ವಿಭಾಗದ ಅನುಭವಿಗಳಿದ್ದಾರೆ. ಹೀಗಿದ್ದರೂ ಇಲ್ಲಿನ ಆಡಳಿತ ವ್ಯವಸ್ಥೆ ಮಾತ್ರ ರಾಜ್ಯದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡದೆ ಮೋಸ ಎಸಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರಕಾರ ಉಪಕುಲಪತಿಗಳ ತಂತ್ರಗಾರಿಕೆಯನ್ನು ಬಯಲಿಗೆಳೆದು ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಯಬೇಕು. ಕರ್ನಾಟಕದ ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶದಲ್ಲಿ ಶೇ.25ರಷ್ಟು ಸೀಟುಗಳನ್ನು ನೀಡದಿದ್ದರೆ ಈ ವಿವಿಯನ್ನು ರಾಜ್ಯದಿಂದ ಹೊರದಬ್ಬುವ ತೀರ್ಮಾನವನ್ನು ತೆಗೆದುಕೊಳ್ಳಬೇಕು ಎಂದು ರಮೇಶ್ ಬಾಬು ಸರಕಾರವನ್ನು ಒತ್ತಾಯಿಸಿದರು.