ರಾಜ್ಯದಲ್ಲಿ H3N2 ಸೋಂಕು ತಡೆಗಟ್ಟಲು ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

ಬೆಂಗಳೂರು, ಮಾ.6: ರಾಜ್ಯದಲ್ಲಿ ಎಚ್3ಎನ್2 ಸೋಂಕು ಹರಡದಂತೆ ತಡೆಗಟ್ಟಲು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸೋಮವಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಐಎಲ್‍ಐ/ಎಸ್‍ಎಆರ್‍ಐ ಪ್ರಕರಣಗಳ ಬಗ್ಗೆ ಮಾದರಿ ಸಂಗ್ರಹಿಸಿ ಸೂಕ್ತ ನಿಗಾವಹಿಸಬೇಕು. ಅಲ್ಲದೆ, ಐಡಿಎಸ್‍ಪಿ-ಐಎಚ್‍ಐಪಿ ಪೋರ್ಟಲ್‍ನಲ್ಲಿ ಮಾಹಿತಿ ಹಾಕಬೇಕು. ಅಗತ್ಯ ಪ್ರಮಾಣದ ಔಷಧಿಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಐಎಲ್‍ಐ, ಎಸ್‍ಎಆರ್‍ಐ ಪ್ರಕರಣಗಳ ಚಿಕಿತ್ಸೆ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿಗಳು ಪಿಪಿಇ ಕಿಟ್ ಸೇರಿದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು.
ಐಸಿಯು, ಐಸೋಲೇಷನ್ ವಾರ್ಡ್‍ಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಸೋಂಕು ನಿವಾರಕ ಲಸಿಕೆ ಪಡೆದಿರುವುದನ್ನು ಖಾತ್ರಿಗೊಳಿಸಬೇಕು. ಖಾಸಗಿ ಹಾಗೂ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
ಎಲ್ಲ ಕೋವಿಡ್ ನೆಗೆಟಿವ್ ಇದ್ದು ಎಸ್‍ಎಆರ್‍ಐ ಪ್ರಕರಣಗಳಲ್ಲಿ ಸಾವು ಉಂಟಾಗಿದ್ದರೆ ವೈರಸ್ ಸಂಶೋಧನಾ ಹಾಗೂ ಡಯಾಗ್ನಸ್ಟಿಕ್ ಪ್ರಯೋಗಾಲಯಗಳಲ್ಲಿ ಅಗತ್ಯ ಪರೀಕ್ಷೆಗಳನ್ನು ಮಾಡಬೇಕು. ಅಲ್ಲದೆ, ಸಾರ್ವಜನಿಕರಲ್ಲಿ ಸೋಂಕಿನ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ.ರಣದೀಪ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಸೋಂಕಿನ ಲಕ್ಷಣಗಳು
ಎಚ್3ಎನ್2 ಸೋಂಕು ಸಾಮಾನ್ಯವಾಗಿ 5-7 ದಿನಗಳ ಕಾಲ ಇರುತ್ತದೆ. ಕಲುಷಿತ ವಾತಾವರಣವಿದ್ದರೆ ಮೂರು ವಾರಗಳು ಇರುತ್ತದೆ. ಗರ್ಭೀಣಿಯರು, ಮಕ್ಕಳು, ಹಿರಿಯ ನಾಗರಿಕರಿಗೆ ಸೋಂಕು ಹರಡುವ ಸಾಧ್ಯತೆಯಿದೆ. ಜ್ವರ, ಚಳಿ, ತುರಿಕೆ, ಮೈ-ಕೈ ನೋವು, ಶೀತ, ಒಣ ಕೆಮ್ಮು, ಸೀನುವುದು ಸೋಂಕಿನ ಲಕ್ಷಣಗಳಾಗಿವೆ.







