ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರಿಗೆ ತೊಂದರೆಯಿಲ್ಲ: ಬಿಹಾರದ ಅಧಿಕಾರಿಗಳು

ಚೆನ್ನೈ,ಮಾ.6: ರಾಜ್ಯದಲ್ಲಿ ವಲಸೆ ಕಾರ್ಮಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಮಿಳುನಾಡು ಸರಕಾರವು ತೆಗೆದುಕೊಂಡ ಕ್ರಮಗಳ ಬಗ್ಗೆ ನಾಲ್ವರು ಬಿಹಾರ ಅಧಿಕಾರಿಗಳ ತಂಡವು ಸಂತೃಪ್ತಿಯನ್ನು ವ್ಯಕ್ತಪಡಿಸಿದೆ.
ಬಿಹಾರ ಗ್ರಾಮೀಣಾಭಿವೃದ್ಧಿ ಕಾರ್ಯದರ್ಶಿ ಡಿ.ಬಾಲಮುರುಗನ್ ನೇತೃತ್ವದ ತಂಡವು ರವಿವಾರ ತಿರುಪುರಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಈ ಹೇಳಿಕೆಯನ್ನು ನೀಡಿದೆ. ಜವಳಿ ಕೈಗಾರಿಕೆಗಳ ಕೇಂದ್ರವಾಗಿರುವ ತಿರುಪುರದಲ್ಲಿ ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರಿದ್ದಾರೆ.
ತಮಿಳುನಾಡು ಸರಕಾರದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ವಲಸೆ ಕಾರ್ಮಿಕರ ಸುರಕ್ಷತೆಯನ್ನು ಖಚಿತಪಡಿಸಲು ತಮಿಳುನಾಡು ಮತ್ತು ಬಿಹಾರ ಸರಕಾರಗಳು ಎಲ್ಲ ಪ್ರಯತ್ನಗಳನ್ನು ಮಾಡುತ್ತಿವೆ ಎಂದು ಬಾಲಮುರುಗನ್ ತಿಳಿಸಿದರು.
ಈ ವಾರದ ಆರಂಭದಲ್ಲಿ ಬಿಹಾರ ಮತ್ತು ಈಶಾನ್ಯ ಭಾರತದ ವಲಸೆ ಕಾರ್ಮಿಕರ ಮೇಲೆ ಹಲ್ಲೆಗಳನ್ನು ತೋರಿಸುವ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು,ಇವು ನಕಲಿ ವೀಡಿಯೊಗಳಾಗಿವೆ ಎಂದು ತಮಿಳುನಾಡು ಪೊಲೀಸರು ಹೇಳಿದ್ದರು.
ವೀಡಿಯೊಗಳನ್ನು ಉಲ್ಲೇಖಿಸಿ ನಿತೀಶ್ ಕುಮಾರ ಸರಕಾರವನ್ನು ಟೀಕಿಸಿದ್ದ ಬಿಹಾರ ಬಿಜೆಪಿಯು,ಅದು ರಾಜ್ಯದ ವಲಸೆ ಕಾರ್ಮಿಕರನ್ನು ರಕ್ಷಿಸಲು ವಿಫಲಗೊಂಡಿದೆ ಎಂದು ಆರೋಪಿಸಿತ್ತು. ಮಾ.4ರಂದು ವದಂತಿಗಳನ್ನು ತಳ್ಳಿಹಾಕಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು,ರಾಜ್ಯದಲ್ಲಿ ವಲಸೆ ಕಾರ್ಮಿಕರು ಸುರಕ್ಷಿತವಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು. ಅದೇ ದಿನ ಪೊಲೀಸರು ಸುಳ್ಳು ಮಾಹಿತಿಯನ್ನು ಹರಡಿದ್ದಕ್ಕಾಗಿ ಉ.ಪ್ರದೇಶದ ಬಿಜೆಪಿ ವಕ್ತಾರ ಪ್ರಶಾಂತ ಪಟೇಲ್ ಉಮ್ರಾವ್ ಮತ್ತು ಹಿಂದಿ ವೃತ್ತಪತ್ರಿಕೆ ದೈನಿಕ ಭಾಸ್ಕರ್‌ನ ಸಂಪಾದಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.







