ಅಫ್ಘಾನ್ ವಿವಿ ಪುನರಾರಂಭ: ಮಹಿಳೆಯರಿಗೆ ಅವಕಾಶವಿಲ್ಲ; ವರದಿ

ಕಾಬೂಲ್, ಮಾ.6: ಚಳಿಗಾಲದ ರಜೆ ಕಳೆದು ಅಫ್ಘಾನಿಸ್ತಾನದ ವಿವಿಗಳು ಸೋಮವಾರ ಪುನರಾರಂಭಗೊಂಡಿವೆ, ಆದರೆ ಮಹಿಳೆಯರ ಪ್ರವೇಶಕ್ಕೆ ಇರುವ ನಿಷೇಧವನ್ನು ತಾಲಿಬಾನ್ ಮುಂದುವರಿಸಿದೆ ಎಂದು ವರದಿಯಾಗಿದೆ.
ವಿದ್ಯಾರ್ಥಿನಿಯರು ಕಟ್ಟುನಿಟ್ಟಾದ ವಸ್ತ್ರಸಂಹಿತೆಯನ್ನು ನಿರ್ಲಕ್ಷಿಸಿದ್ದಾರೆ ಮತ್ತು ಕಾಲೇಜಿನ ಕ್ಯಾಂಪಸ್ ಪ್ರವೇಶಿಸುವ ಸಂದರ್ಭ ಪುರುಷ ಸಂಬಂಧಿ ಜತೆಗಿರಬೇಕು ಎಂಬ ಸೂಚನೆಯನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದ್ದ ತಾಲಿಬಾನ್ ಸರಕಾರ ಶಿಕ್ಷಣ ಸಂಸ್ಥೆಗಳಿಗೆ ಮಹಿಳೆಯರಿಗೆ ಪ್ರವೇಶಾವಕಾಶ ನಿರಾಕರಿಸಿದೆ. ಮಹಿಳೆಯರ ಶಿಕ್ಷಣದ ಹಕ್ಕನ್ನು ನಿರಾಕರಿಸಿರುವ ತಾಲಿಬಾನ್ ಕ್ರಮಕ್ಕೆ ಮುಸ್ಲಿಮ್ ದೇಶಗಳು ಸೇರಿದಂತೆ ಜಾಗತಿಕ ಸಮುದಾಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮಹಿಳೆಯರು ಅಗತ್ಯಬಿದ್ದರೆ ಮಾತ್ರ ಮನೆಯಿಂದ ಹೊರತೆರಳಲಿ: ತಾಲಿಬಾನ್ ಆದೇಶ
ಮಹಿಳೆಯರು ಸಾರ್ವಜನಿಕ ಪ್ರದೇಶಕ್ಕೆ ತೆರಳುವಾಗ ತಲೆಯಿಂದ ಕಾಲಿನ ಬೆರಳಿನ ತನಕ ಆವರಿಸುವಂತೆ ಬಟ್ಟೆ ಧರಿಸಬೇಕು ಮತ್ತು ಅಗತ್ಯಬಿದ್ದರೆ ಮಾತ್ರ ಮನೆಯಿಂದ ಹೊರತೆರಳಬೇಕು ಎಂದು ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತ ಶನಿವಾರ ಆದೇಶ ಜಾರಿಗೊಳಿಸಿದೆ.
ಮಹಿಳೆಯರು ಅಗತ್ಯಬಿದ್ದರೆ ಮಾತ್ರ ಮನೆಯಿಂದ ಹೊರತೆರಳಬೇಕು ಮತ್ತು ಆಗಲೂ ಪುರುಷ ಸಂಬಂಧಿ ಜತೆಗಿರಬೇಕು. ಇದನ್ನು ಉಲ್ಲಂಘಿಸಿದವರಿಗೆ ಸಮನ್ಸ್ ಜಾರಿಗೊಳಿಸಿ, ವಿಚಾರಣೆ ನಡೆಸಿ ಜೈಲುಶಿಕ್ಷೆ ವಿಧಿಸಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ಆದೇಶದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಫ್ಘಾನಿಸ್ತಾನದಲ್ಲಿನ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ, ಈ ಕುರಿತು ತಾಲಿಬಾನ್‍ನಿಂದ ಸ್ಪಷ್ಟನೆ ಕೇಳುವುದಾಗಿ ಹೇಳಿದ್ದಾರೆ.







