ಅನುಕಂಪದ ಆಧಾರದಲ್ಲಿ ಉದ್ಯೋಗ ಕೋರಿಕೆಗಳ ಇತ್ಯರ್ಥದಲ್ಲಿ ವಿಳಂಬ ಬೇಡ: ಸುಪ್ರೀಂ ಕೋರ್ಟ್
ಹೊಸದಿಲ್ಲಿ,ಮಾ.6: ಅನುಕಂಪದ ಆಧಾರದಲ್ಲಿ ಉದ್ಯೋಗಕ್ಕೆ ಕೋರಿಕೆಯ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ಅತ್ಯಂತ ಸಂವೇದನೆಯನ್ನು ಹೊಂದಿರುವಂತೆ ಮತ್ತು ವಿಳಂಬಿಸದಂತೆ ಸರಕಾರಿ ಅಧಿಕಾರಿಗಳಿಗೆ ಸರ್ವೋಚ್ಚ ನ್ಯಾಯಾಲಯವು ನಿರ್ದೇಶನ ನೀಡಿದೆ. ಸಾವು ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ,ಅದು ಕಿರಿಯರು ಅಥವಾ ಹಿರಿಯರು ಮತ್ತು ಬಡವರು ಅಥವಾ ಶ್ರೀಮಂತರು ಎಂಬ ಭೇದವನ್ನೆಣಿಸುವುದಿಲ್ಲ. ಕುಟುಂಬದ ಆಧಾರ ಸ್ತಂಭವಾದ ವ್ಯಕ್ತಿಯ ಸಾವು ಜೀವನೋಪಾಯಕ್ಕೆ ಯಾವುದೇ ಮಾರ್ಗವಿಲ್ಲದೆ ಕುಟುಂಬವನ್ನು ಕಡುಬಡತನಕ್ಕೆ ತಳ್ಳುತ್ತದೆ ಎಂದು ಅದು ಹೇಳಿದೆ.
ಮೃತ ಉದ್ಯೋಗಿಯ ಕುಟುಂಬವನ್ನು ಆಧಾರ ಸ್ತಂಭವನ್ನು ಕಳೆದುಕೊಂಡು ಎದುರಾಗುವ ದಿಢೀರ್ ಬಿಕ್ಕಟ್ಟಿನಿಂದ ಪಾರು ಮಾಡುವುದು ಅನುಕಂಪದ ಉದ್ಯೋಗವನ್ನು ನೀಡುವ ನಿಬಂಧನೆಯ ಉದ್ದೇಶವಾಗಿದೆ ಎಂದು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಬಿ.ವಿ.ನಾಗರತ್ನಾ ಅವರ ಪೀಠವು ಹೇಳಿತು.
ಸೇವೆಯಲ್ಲಿದ್ದಾಗಲೇ ನಿಧನರಾಗಿದ್ದ ಮಹಾನಗರ ಪಾಲಿಕೆಯ ಉದ್ಯೋಗಿಗಳ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವಂತೆ ಆದೇಶಿಸಿದ್ದ ಕಲಕತ್ತಾ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರಕಾರವು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ ಪೀಠವು,ಅನುಕಂಪದ ಆಧಾರದಲ್ಲಿ ನೇಮಕಾತಿಗಳನ್ನು ನಿಯಂತ್ರಿಸಲು ರಾಜ್ಯದಲ್ಲಿಯ ಸ್ಥಳೀಯ ಪ್ರಾಧಿಕಾರದಡಿ ಹಾಲಿ ಯಾವುದೇ ನೀತಿಗಳಿಲ್ಲ. ಇಂತಹ ನೀತಿ ಅಸ್ತಿತ್ವದಲ್ಲಿದೆ ಎಂದು ಭಾವಿಸಿದರೂ ಅನುಕಂಪದ ಆಧಾರದಲ್ಲಿ ಉದ್ಯೋಗಕ್ಕಾಗಿ ಅರ್ಜಿಗಳನ್ನು ಅವು ಸಲ್ಲಿಕೆಯಾದ ಹಲವಾರು ವರ್ಷಗಳ ಬಳಿಕ ಪರಿಗಣಿಸುವಂತೆ ಮತ್ತು ನಿರ್ಧರಿಸುವಂತೆ ನಿರ್ದೇಶ ನೀಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿತು.
ಬರ್ದ್ವಾನ್,ರಾಣಾಘಾಟ್ ಮತ್ತು ಹಬ್ರಾ ಮಹಾನಗರ ಪಾಲಿಕೆಗಳ ಮೃತ ಉದ್ಯೋಗಿಗಳ ಕಾನೂನುಬದ್ಧ ವಾರಸುದಾರರು ಅನುಕಂಪದ ಆಧಾರದಲ್ಲಿ ಉದ್ಯೋಗಗಳನ್ನು ಕೋರಿ 2005-06ರಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದು,ಈಗಾಗಲೇ 17-18 ವರ್ಷಗಳು ಕಳೆದು ಹೋಗಿವೆ ಎಂದು ಬೆಟ್ಟು ಮಾಡಿದ ಸರ್ವೋಚ್ಚ ನ್ಯಾಯಾಲಯವು,ಮೃತ ಉದ್ಯೋಗಿಯು ಯಾವಾಗಲೂ ಸಂಪತ್ತು,ಆಸ್ತಿಯನ್ನು ಬಿಟ್ಟುಹೋಗುವುದಿಲ್ಲ,ಹಲವೊಮ್ಮೆ ಆತ/ಆಕೆ ತನ್ನ ಕುಟುಂಬವು ಎದುರಿಸಲು ಬಡತನವನ್ನು ಬಿಟ್ಟುಹೋಗಬಹದು ಎಂದು ಹೇಳಿತು.
ವ್ಯಕ್ತಿಯ ಸಾವು ಆತನ ಕುಟುಂಬಕ್ಕೆ ಆರ್ಥಿಕ ಸಾವನ್ನು ತರುವುದಿಲ್ಲ ಎನ್ನವುದನ್ನು ಖಚಿತಪಡಿಸಿಕೊಳ್ಳಲು ಏನನ್ನಾದರೂ ಮಾಡುವ ಅಗತ್ಯವಿದೆ ಎಂದು ಅದು ಅಭಿಪ್ರಾಯಿಸಿತು.