ಮಾಡಾಳ್ ಹಗರಣದ ದಿಕ್ಕು ತಪ್ಪಿಸಲು ಬಿಜೆಪಿ ಕಾಫಿ-ತಿಂಡಿ ಹಿಂದೆ ಬಿದ್ದಿದೆ: ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು, ಮಾ. 6: ‘ನಮ್ಮ ಸರಕಾರದ ಅವಧಿಯಲ್ಲಿ 3.26 ಕೋಟಿ ರೂ. ಕಾಫಿ-ತಿಂಡಿ ಮತ್ತು ಊಟ ಇತ್ಯಾದಿ ಆತಿಥ್ಯದ ವೆಚ್ಚಕ್ಕೆ ಖರ್ಚಾಗಿದ್ದರೆ, 200 ಕೋಟಿ ರೂ.ಖರ್ಚು ಮಾಡಿದ್ದಾರೆಂದು ಸುಳ್ಳನ್ನು ಉತ್ಪಾದಿಸಿ ನಾಡಿನ ಜನತೆಗೆ ಬಿಜೆಪಿ ದ್ರೋಹ ಬಗೆದಿದೆ. ಇದು ಐಪಿಸಿ ಕಲಂ 420ಗೆ ಅರ್ಹವಾದ ಪ್ರಕರಣ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಸೋಮವಾರ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಆರ್.ರಮೇಶ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ‘ಬಿಜೆಪಿ ಸುಳ್ಳಿನ ಕಾರ್ಖಾನೆ ಎಂಬುದನ್ನು ಪದೇ ಪದೇ ಸಾಬೀತು ಮಾಡುತ್ತಿದೆ. ಇಂದೂ ಮರಿ ಸುಳ್ಳಿನ ಮೆಶೀನ್ ಒಂದು ನಮ್ಮ ಸರಕಾರದ ಅವಧಿಯಲ್ಲಿ ಕಾಫಿ-ತಿಂಡಿಗೆ 200 ಕೋಟಿ ರೂ.ಖರ್ಚು ಮಾಡಿದೆ ಎಂಬುದೊಂದು ಸುಳ್ಳನ್ನು ಉತ್ಪಾದಿಸಿ ಮೀಡಿಯಾಗಳಿಗೆ ಬಿಡುಗಡೆ ಮಾಡಿದೆ. ಈ ಬಿಜೆಪಿಗರು ರಾಜ್ಯದ ಜನರನ್ನೇನು ಮೂರ್ಖರು ಎಂದುಕೊಂಡಿದ್ದಾರಾ?’ ಎಂದು ಪ್ರಶ್ನಿಸಿದ್ದಾರೆ.
‘40 ಪರ್ಸೆಂಟ್, ಮಾಡಾಳ್ ವಿರೂಪಾಕ್ಷಪ್ಪ ಹಗರಣದಿಂದ ಕಂಗಾಲಾಗಿರುವ ಬಿಜೆಪಿಯು ಇಂತಹ ಸುಳ್ಳುಗಳನ್ನು ಉತ್ಪಾದಿಸಿಕೊಂಡು ಓಡಾಡುತ್ತಿದೆ. ಒಟ್ಟಾರೆ 5 ವರ್ಷಗಳ ನಮ್ಮ ಸರಕಾರದ ಅವಧಿಯಲ್ಲಿ 3.26 ಕೋಟಿ ರೂ.ಗಳನ್ನು ಮಾತ್ರ ಸಿಎಂ ಕಚೇರಿಯ ಸಭೆಗಳಿಗೆ, ಜನತಾದರ್ಶನಗಳು ಸೇರಿದಂತೆ ಇತರೆ ಕಾರ್ಯಕ್ರಮಗಳಿಗೆ ಕಾಫಿ, ತಿಂಡಿ ಮತ್ತು ಊಟ ಮುಂತಾದವುಗಳಿಗೆ ಖರ್ಚಾಗಿದೆ ಎಂದು ಅವರು ದಾಖಲೆಗಳನ್ನು ನೀಡಿದ್ದಾರೆ.
ಸುಳ್ಳು ಮಾಹಿತಿ ನೀಡಿದ ಎನ್.ಆರ್.ರಮೇಶ್ ಮೇಲೆ ಸಿಎಂ ಕ್ರಿಮಿನಲ್ ಮೊಕದ್ದಮೆ ಹೂಡಲು ಅಧಿಕಾರಿಗಳಿಗೆ ನಿರ್ದೇಶನ ಕೊಡುತ್ತಾರಾ ಎಂಬುದನ್ನು ಕಾದು ನೋಡುತ್ತೇನೆ. ನಿರ್ದೇಶನ ನೀಡದಿದ್ದರೆ ಇಡೀ ಬಿಜೆಪಿಯೆ ನನ್ನ ವಿರುದ್ಧ ಪಿತೂರಿ ಸುಳ್ಳಿನ ಪಿತೂರಿ ನಡೆಸುತ್ತಿದೆ ಎಂಬುದನ್ನು ಜನ ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿ, ಸರಕಾರ ನಡೆಸುತ್ತಿರುವುದು ನಿಜವೇ ಆಗಿದ್ದರೆ ಬಿಜೆಪಿಯ ಮರಿ ಸುಳ್ಳಿನ ಮೆಶೀನುಗಳು ಉತ್ಪಾದಿಸಿ ಗಾಳಿಗೆ ಬಿಟ್ಟಿರುವ 200ಕೋಟಿ ರೂ.ಕಾಫಿ-ತಿಂಡಿಗೆ ಸಿದ್ದರಾಮಯ್ಯ ಖರ್ಚು ಮಾಡಿದ್ದಾರೆಂಬ ದಾಖಲೆಗಳನ್ನು ಜನರ ಮುಂದೆ ಇಡಲಿ ಹಾಗೂ ಇದನ್ನೂ ಸೇರಿಸಿ 40 ಪರ್ಸೆಂಟ್ ಬಿಜೆಪಿಯ ಭ್ರಷ್ಟಾಚಾರಗಳನ್ನೂ ಸೇರಿಸಿ ನಾವು ಮೊದಲಿನಿಂದಲೂ ಒತ್ತಾಯಿಸುತ್ತಿರುವ ಹಾಗೆ ನ್ಯಾಯಾಂಗ ತನಿಖೆಗೆ ಕೊಡಲಿ ಎಂದು ಸಿದ್ದರಾಮಯ್ಯ ಆಗ್ರಹಿದ್ದಾರೆ.
‘ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣದಲ್ಲಿ ವಿಷಯಾಂತರ ಮಾಡಲು ಈ ರೀತಿಯ ಚೀಪ್ ಗಿಮಿಕ್ಕುಗಳನ್ನು ಮಾಡಲು ಬಿಜೆಪಿ ಹೀನಾತಿಹೀನ ರಾಜಕಾರಣ ಮಾಡಲು ಪ್ರಾರಂಭಿಸಿದೆ ಎನ್ನುವುದಕ್ಕೆ ಇದು ಅತ್ಯುತ್ತಮ ಉದಾಹರಣೆ. ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ಸರಕಾರವೆ ಇಂದು ನನಗೆ ನೀಡಿರುವ ಮಾಹಿತಿಯಂತೆ ನಮ್ಮ ಸರಕಾರದ ಅವಧಿಯಲ್ಲಿ ಊಟ-ತಿಂಡಿಗೆ ಖರ್ಚಾಗಿರುವ ಮೊತ್ತ 3.26ಕೋಟಿ ರೂ.ಗಳು ಮಾತ್ರ. 200ಕೋಟಿ ರೂ.ಎಂಬುದು ಬಿಜೆಪಿಯ ಸುಳ್ಳಿನ ಕಾರ್ಖನೆಯ ಉತ್ಪಾದನೆ. ಹಾಗಾಗಿ ನಾಡಿನ ಜನ ಬಿಜೆಪಿಯ ದುರುಳತನವನ್ನು ಹಾಗೂ ಸುಳ್ಳು ಉತ್ಪಾದನೆಯ ಮೆಶೀನುಗಳನ್ನು ತಿಪ್ಪೆಗೆಸೆದು ದ್ವೇಷ, ಹಿಂಸೆ ರಹಿತ ಸಮಾಜದ ನಿರ್ಮಾಣದ ಕಡೆಗೆ ನಡೆಯಬೇಕು’
-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ







