ಉದ್ಯೋಗಕ್ಕಾಗಿ ಭೂ ಹಗರಣ: ಇಂದು ಸಿಬಿಐಯಿಂದ ಲಾಲುಪ್ರಸಾದ್ ವಿಚಾರಣೆ

ಹೊಸದಿಲ್ಲಿ: ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳವು(ಸಿಬಿಐ) ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರನ್ನು ಪಾಟ್ನಾದ ಅವರ ಮನೆಯಲ್ಲಿ ಪ್ರಶ್ನಿಸಿದ ಒಂದು ದಿನದ ನಂತರ ಇಂದು ಇದೇ ಪ್ರಕರಣದಲ್ಲಿ ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ (Lalu Prasad Yadav)ರನ್ನು ವಿಚಾರಣೆ ನಡೆಸಲು ಲಾಲೂ ಅವರ ಪುತ್ರಿ ಮಿಸಾ ಭಾರ್ತಿ ಅವರ ದಿಲ್ಲಿಯಲ್ಲಿರುವ ಮನೆಗೆ ತಲುಪಿದೆ.
2004 ರಿಂದ 2009 ರ ವರೆಗೆ ಲಾಲು ಪ್ರಸಾದ್ ಕೇಂದ್ರ ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ಉದ್ಯೋಗಕ್ಕೆ ಬದಲಾಗಿ ಯಾದವ್ ಹಾಗೂ ಅವರ ಕುಟುಂಬ ಸದಸ್ಯರು ಅಗ್ಗದ ದರದಲ್ಲಿ ಭೂಮಿ ಖರೀದಿಸಿದ್ದಾರೆ ಎಂಬ ಆರೋಪವನ್ನು ಆಧರಿಸಿ ಲಾಲು ಪ್ರಸಾದ್ ಯಾದವ್ ದಂಪತಿಗಳು ಹಾಗೂ ಅವರ ಪುತ್ರಿಯರಾದ ಮಿಸಾ ಮತ್ತು ಹೇಮಾ ಅವರ ಹೆಸರನ್ನು ಸಿಬಿಐ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.
ಮೇ 2022 ರಲ್ಲಿ ನೋಂದಾಯಿಸಲಾದ ಎಫ್‌ಐಆರ್,ನಲ್ಲಿ ಅನುಭವಿ ರಾಜಕಾರಣಿ ಲಾಲು , ಅವರ ಪತ್ನಿ ಹಾಗೂ ಅವರ ಪುತ್ರಿಯರಲ್ಲದೆ ಭೂಮಿಗೆ ಬದಲಾಗಿ ಉದ್ಯೋಗವನ್ನು ಪಡೆದಿದ್ದಾರೆ ಎಂದು ಹೇಳಲಾದ 12 ಜನರನ್ನು ಹೆಸರಿಸಿದೆ.
ಕಳೆದ ವರ್ಷ ಜುಲೈನಲ್ಲಿ ಯಾದವ್ ಅವರ ಸಹಾಯಕ ಹಾಗೂ ವಿಶೇಷ ಕರ್ತವ್ಯದ ಮಾಜಿ ಅಧಿಕಾರಿ (OSD) ಭೋಲಾ ಯಾದವ್ ಅವರನ್ನು ಈ ಪ್ರಕರಣದಲ್ಲಿ ಸಿಬಿಐ ಬಂಧಿಸಿತ್ತು.





