‘ದಿ ಹಿಂದೂ’ ಪತ್ರಿಕೆಯ ಹಿರಿಯ ಉಪ ಸಂಪಾದಕ ದಿನಕರ್ ನಿಧನ

ಹೊಸದಿಲ್ಲಿ: ‘ದಿ ಹಿಂದೂ’ ಪತ್ರಿಕೆಯ ಹಿರಿಯ ಉಪ ಸಂಪಾದಕ (ಕ್ರೀಡೆ) ದಿನಕರ್ ಇಂದೋರ್‌ನಲ್ಲಿ ನಿಧನರಾದರು.
ಹಿರಿಯ ಕ್ರಿಕೆಟ್ ಲೇಖಕರಾದ ದಿನಕರ್ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಅನ್ನು ವರದಿ ಮಾಡಿದ್ದರು. ನಾಲ್ಕನೇ ಹಾಗೂ ಅಂತಿಮ ಟೆಸ್ಟ್‌ಗಾಗಿ ಅಹಮದಾಬಾದ್‌ಗೆ ತೆರಳಲು ತಯಾರಿ ನಡೆಸುತ್ತಿದ್ದರು. ಅವರು ತಮ್ಮ ಹೋಟೆಲ್ ಕೋಣೆಯಲ್ಲಿ ಕುಸಿದುಬಿದ್ದರು. ದಿನಕರ್ ಅವರು ತಮ್ಮ ತಂದೆಯನ್ನು ಅಗಲಿದ್ದಾರೆ.
'ದಿ ಹಿಂದೂ' ಗ್ರೂಪ್‌ನೊಂದಿಗೆ ಮೂರು ದಶಕಗಳಿಗೂ ಹೆಚ್ಚು ಸಮಯ ಸೇವೆ ಸಲ್ಲಿಸಿರುವ 57 ವರ್ಷದ ದಿನಕರ್ ಅವರು 'ಸ್ಪೋರ್ಟ್‌ಸ್ಟಾರ್'ಗೆ ಸ್ಥಳಾಂತರಗೊಳ್ಳುವ ಮೊದಲು ಜನರಲ್ ಡೆಸ್ಕ್‌ನಲ್ಲಿ ಕೆಲಸ ಮಾಡಿದ್ದರು. ನಂತರ ಅವರು 'ದಿ ಹಿಂದೂ'ವಿನ ಕ್ರೀಡಾ ವಿಭಾಗಕ್ಕೆ ತೆರಳಿದರು.
ದಿನಕರ್ ಅವರು ಸ್ಥಳೀಯ ಫುಟ್ಬಾಲ್ ಹಾಗೂ ಹಾಕಿ ಜೊತೆಗೆ ಕ್ರಿಕೆಟ್‌ನಿಂದ ಟೆನಿಸ್ ಹಾಗೂ ಸೈಲಿಂಗ್ ತನಕದ ಕ್ರೀಡೆಗಳ ಬಗ್ಗೆ ಸಮಗ್ರ ವರದಿ ಮಾಡಿದ್ದಾರೆ. ಅವರು ಕ್ರಿಕೆಟ್‌ನಲ್ಲಿ ಪರಿಣತಿ ಪಡೆದಿದ್ದರು, ಹೀಗಾಗಿ ಅವರು ಭಾರತ ಹಾಗೂ ಜಗತ್ತಿನಾದ್ಯಂತ ಕ್ರಿಕೆಟ್ ಕುರಿತು ವರದಿ ಮಾಡಲು ಪ್ರಯಾಣಿಸಿದ್ದರು.





