ರಾಜಕೀಯ ಪ್ರಭಾವಕ್ಕೆ ಒಳಗಾಗಿ ಕಡತಗಳ ವಿಲೇವಾರಿಗೆ ಒತ್ತಡ ಆರೋಪ: ದ.ಕ ಜಿಲ್ಲಾಧಿಕಾರಿ ವಿರುದ್ಧ ದೂರು

ಮಂಗಳೂರು,ಮಾ.7: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ರಾಜಕೀಯ ಪ್ರಭಾವಕ್ಕೆ ಒಳಗಾಗಿ ಕಡತಗಳನ್ನು ನಿಯಮ ಮೀರಿ ವಿಲೇವಾರಿ ಮಾಡಲು ಒತ್ತಡ ಹೇರುತ್ತಿದ್ದಾರೆ ಮತ್ತು ರಾಜಕೀಯ ವ್ಯಕ್ತಿಗಳ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಸರಕಾರದ ಮುಖ್ಯ ಕಾರ್ಯದರ್ಶಿಗೆ ಜಿಲ್ಲೆಯ ಕೆಲವು ಅಧಿಕಾರಿಗಳು ಹಾಗೂ ಕೆಲವು ಸಿಬ್ಬಂದಿ ದೂರು ನೀಡಿರುವ ಘಟನೆ ವರದಿಯಾಗಿದೆ.
ಈ ದೂರಿನ ಕುರಿತು ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಮೈಸೂರಿನ ಪ್ರಾದೇಶಿಕ ಆಯುಕ್ತರಿಗೆ ಕಂದಾಯ ಇಲಾಖೆ ಸೂಚಿಸಿದೆ ಎಂದು ತಿಳಿದು ಬಂದಿದೆ. ರವಿಕುಮಾರ್ ಅವರು ರಾಜಕೀಯ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗಿ ಪ್ರಮುಖ ಕಡತಗಳನ್ನು ನಿಯಮ ಮೀರಿ ವಿಲೇವಾರಿ ಮಾಡಲು ಒತ್ತಡ ಹೇರುತ್ತಿದ್ದಾರೆ. ಅರ್ಜಿದಾರರು, ಸಂಘ ಸಂಸ್ಥೆಗಳು ನೀಡಿದ ಅರ್ಜಿಗಳನ್ನು ವಿಲೇವಾರಿ ಮಾಡುವಾಗ ಅಧೀನ ಕಚೇರಿಗಳಿಂದ ಯಾವುದೇ ವರದಿ ಪಡೆಯದೇ ಅರ್ಜಿದಾರರ ಪರವಾಗಿ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ಅಧಿಕಾರಿಗಳು ಆರೋಪಿಸಿದ್ದಾರೆ ಎನ್ನಲಾಗಿದೆ.
ದ.ಕ. ಜಿಲ್ಲಾಧಿಕಾರಿ ನ್ಯಾಯಾಲಯದ ಪ್ರಕರಣಗಳಲ್ಲಿ ರಾಜಕೀಯ ವ್ಯಕ್ತಿಗಳ ಪ್ರಭಾವಕ್ಕೊಳಗಾಗುತ್ತಿದ್ದಾರೆ ಹಾಗೂ ಏಕಪಕ್ಷೀಯವಾಗಿ ಆದೇಶ ಹೊರಡಿಸುತ್ತಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ಸಣ್ಣ ಪುಟ್ಟ ವಿಷಯಗಳಿಗೂ ನೋಟಿಸ್ ನೀಡುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ ಎಂದೂ ಆರೋಪಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್, "ಜನತೆಯ ಕೆಲಸಗಳನ್ನು ತ್ವರಿತವಾಗಿ ನಿರ್ವಹಿಸುವ ಸಲುವಾಗಿ ಅಧಿಕಾರಿಗಳಿಗೆ ಸೂಚನೆ ನೀಡಬೇಕಾಗುತ್ತದೆ. ಆದರೆ ಈ ರೀತಿ ಆರೋಪ ಯಾಕೆ ಮಾಡಿದ್ದಾರೆ ಎಂದು ಅರ್ಥವಾಗಿಲ್ಲ" ಎಂದು ಹೇಳಿದ್ದಾರೆ.