ದಿಲ್ಲಿ ಅಬಕಾರಿ ನೀತಿ ಹಗರಣ: ತಿಹಾರ್ ಕಾರಾಗೃಹದಲ್ಲಿ ಸಿಸೋಡಿಯಾ ವಿಚಾರಣೆ

ಹೊಸದಿಲ್ಲಿ, ಮಾ. 7: ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಈ.ಡಿ.) ಮಂಗಳವಾರ ದಿಲ್ಲಿ ಮಾಜಿ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರ ವಿಚಾರಣೆ ನಡೆಸಿತು ಹಾಗೂ ಹೇಳಿಕೆಗಳನ್ನು ದಾಖಲಿಸಿಕೊಂಡಿತು.
ಇದೇ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಹೈದರಾಬಾದ್ ಮೂಲದ ಮದ್ಯದ ಉದ್ಯಮಿ ಅರುಣ್ ರಾಮಚಂದ್ರ ಪಿಳ್ಳೈ ಅವರನ್ನು ಸೋಮವಾರ ಸಂಜೆ ವಶಕ್ಕೆ ತೆಗೆದುಕೊಂಡಿದೆ.
ತಿಹಾರ್ ಕಾರಾಗೃಹಕ್ಕೆ ಭೇಟಿ ನೀಡಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಣ ಅಕ್ರಮ ತಡೆ ಕಾಯ್ದೆ (ಪಿಎಎಲ್‌ಎ) ಅಡಿ ಸಿಸೋಡಿಯಾ ಅವರ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಬಕಾರಿ ನೀತಿ ಹಗರಣದಲ್ಲಿ ಸಿಸೋಡಿಯಾ ಸೇರಿದಂತೆ 36 ಆರೋಪಿಗಳು ಸಾವಿರಾರು ಕೋಟಿ ರೂ. ಲಂಚ ಪಡೆದಿದ್ದಾರೆ. ಇದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶ ಮಾಡಿದ್ದಾರೆ ಎಂಬುದು ತನಿಖೆಯಿಂದ ದೃಢಪಟ್ಟಿದೆ ಎಂದು ಜಾರಿ ನಿರ್ದೇಶನಾಲಯ ದೋಷಾರೋಪ ಪಟ್ಟಿಯ ಮೂಲಕ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಅನುಮತಿ ಪಡೆದು ಅದು ಸಿಸೋಡಿಯಾ ಅವರ ಹೇಳಿಕೆ ದಾಖಲು ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸಕ್ತ ರದ್ದುಗೊಳಿಸಲಾದ ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಸಿಸೋಡಿಯಾ ಅವರನ್ನು ಸಿಬಿಐ ಫೆಬ್ರವರಿ 26ರಂದು ಬಂಧಿಸಿತ್ತು.







