ಹನುಮಾನ್ ವಿಗ್ರಹದ ಮುಂದೆ ಮಹಿಳಾ ಬಾಡಿಬಿಲ್ಡಿಂಗ್ ಪ್ರದರ್ಶನ: ಕಾಂಗ್ರೆಸ್- ಬಿಜೆಪಿ 'ಜಗಳಬಂದಿ'

ರತ್ಲಂ: ಭಾರತೀಯ ಜನತಾ ಪಕ್ಷ ಮಧ್ಯಪ್ರದೇಶದ ರತ್ಲಂನಲ್ಲಿ ಆಯೋಜಿಸಿದ್ದ ಬಾಡಿಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಹಿಳಾ ಬಾಡಿಬಿಲ್ಡರ್‌ಗಳು ಹನುಮಾನ್ ವಿಗ್ರಹದ ಮುಂದೆ ’ಫೋಸ್’ ನೀಡಿದ್ದಾರೆ ಎಂದು ಆಪಾದಿಸಿ ಕಾಂಗ್ರೆಸ್ ಮುಖಂಡರು ಆವರಣವನ್ನು ಗಂಗಾಜಲ ಸಿಂಪಡಿಸಿ 'ಶುದ್ಧ'ಗೊಳಿಸಿದ ಘಟನೆ ವರದಿಯಾಗಿದೆ.
13ನೇ ಮಿಸ್ಟರ್ ಜ್ಯೂನಿಯರ್ ಬಾಡಿಬಿಲ್ಡಿಂಗ್ ಸ್ಪರ್ಧೆ ಮಾರ್ಚ್ 4 ಹಾಗೂ 5ರಂದು ನಡೆದಿತ್ತು. ಇದರಲ್ಲಿ ಮಹಿಳಾ ಬಾಡಿಬಿಲ್ಡರ್‌ಗಳು ಹನುಮಾನ್ ವಿಗ್ರಹದ ಮುಂದೆ ಪ್ರದರ್ಶನ ನೀಡಿದರು. ಇದಾದ ಬಳಿಕ ಸ್ಥಳೀಯ ಕಾಂಗ್ರೆಸ್ ಪದಾಧಿಕಾರಿಗಳು ಗಂಗಾಜಲ ಸಿಂಪಡಿಸಿ, ಹನುಮಾನ್ ಛಾಲೀಸ್ ಪಠಿಸಿ ಅವರಣವನ್ನು ಶುದ್ಧಗೊಳಿಸಿದರು ಎಂದು ಮೂಲಗಳು ಹೇಳಿವೆ.
ಸ್ಪರ್ಧೆಯ ಆಹ್ವಾನಪತ್ರಿಕೆಯ ಪ್ರಕಾರ, ಆಯೋಜನಾ ಸಮಿತಿಯಲ್ಲಿ ನಗರದ ಬಿಜೆಪಿ ಮೇಯರ್ ಪ್ರಹ್ಲಾದ್ ಪಟೇಲ್ ಸೇರಿದ್ದು, ಶಾಸಕ ಚೈತನ್ಯ ಕಶ್ಯಪ್ ಪೋಷಕರಾಗಿದ್ದರು. ಸ್ಪರ್ಧೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳಾ ಬಾಡಿಬಿಲ್ಡರ್‌ಗಳು ಪ್ರದರ್ಶನ ನೀಡುತ್ತಿರುವ ದೃಶ್ಯವಿದೆ. ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡ ಪಾರಸ್ ಸಕ್ಲೇಚಾ, "ಪಟೇಲ್ ಹಾಗೂ ಕಶ್ಯಪ್ ಅಸಭ್ಯತೆಯನ್ನು ಪ್ರದರ್ಶಿಸುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದರು. ಇದರಲ್ಲಿ ಶಾಮೀಲಾದವರನ್ನು ಹನುಮಾನ್ ದೇವರು ಶಿಕ್ಷಿಸಲಿದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಯಾಂಕ್ ಜಾಟ್ ಹೇಳಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ವಕ್ತಾರ ಹಿತೇಶ್ ಬಾಜಪೇಯಿ, "ಮಹಿಳೆಯರು ಕ್ರೀಡೆಯಲ್ಲಿ ಸಾಧನೆ ಮಾಡುವುದನ್ನು ಕಾಂಗ್ರೆಸ್ ಬಯಸುವುದಿಲ್ಲ" ಎಂದು ಹೇಳಿದ್ದಾರೆ. ಆಯೋಜನಾ ಸಮಿತಿಯ ಕೆಲ ಮಂದಿ ಕಾಂಗ್ರೆಸ್ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.
ಸಿಎಂ ಹುಟ್ಟುಹಬ್ಬದ ಅಂಗವಾಗಿ ಸ್ಪರ್ಧೆ ನಡೆದ ಹಿನ್ನೆಲೆಯಲ್ಲಿ ಘಟನೆ ಬಗ್ಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕ್ಷಮೆ ಯಾಚಿಸಬೇಕು ಎಂದು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್‌ನಾಥ್ ಅವರ ಮಾಧ್ಯಮ ಸಲಹೆಗಾರ ಪಿಯೂಶ್ ಬಬೆಲೆ ಆಗ್ರಹಿಸಿದ್ದಾರೆ. ಹಿಂದೂಗಳು ಹಾಗೂ ಹನುಮಾನ್ ದೇವರಿಗೆ ಅಗೌರವ ತೋರಿದ್ದಕ್ಕಾಗಿ ಬಿಜೆಪಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ವಲಸೆ ಕಾರ್ಮಿಕರ ಕುರಿತು ಸುಳ್ಳುಸುದ್ದಿ ಪ್ರಸಾರ: ಬಲಪಂಥೀಯ Opindia ನ್ಯೂಸ್ ಪೋರ್ಟಲ್ ವಿರುದ್ಧ ಪ್ರಕರಣ







