ಮಾಜಿ ಗೆಳೆಯನಿಂದ ಹಲ್ಲೆ, ಬೆದರಿಕೆ: ಮಲಯಾಳಂ ನಟಿ ಅನಿಕಾ ಆರೋಪ

ತಿರುವನಂತಪುರಂ: ಮಲಯಾಳಂ ನಟಿ ಅನಿಕಾ ವಿಕ್ರಮನ್ (Anika Vikraman) ತನ್ನ ಮಾಜಿ ಗೆಳೆಯ ಅನೂಪ್ ಪಿಳ್ಳೈ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಆತನ ವಿರುದ್ಧ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಲಂಚ ನೀಡಿದ್ದಾನೆ ಎಂದು ಆಕೆ ಆರೋಪಿಸಿದ್ದಾರೆ.
ತನಗೆ ನೀಡಿದ ಚಿತ್ರಹಿಂಸೆ ಮತ್ತು ತನ್ನ ಖಾಸಗಿತನದ ಉಲ್ಲಂಘನೆಯ ಬಗ್ಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಅನಿಕಾ ವಿವರಿಸಿದ್ದಾರೆ.
"ಈ ಘಟನೆಗಳ ಹೊರತಾಗಿ, ನನಗೆ ಬೆದರಿಕೆ ಕರೆಗಳು ಬರುತ್ತಿವೆ, ನನ್ನನ್ನು ಮತ್ತು ನನ್ನ ಕುಟುಂಬವನ್ನು ನಿರಂತರವಾಗಿ ಅವಮಾನಿಸಲಾಗುತ್ತಿದೆ" ಎಂದು ಅವರು ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಜೊತೆಗೆ ಮುಖದ ಮೇಲೆ ಆಗಿರುವ ಗಾಯದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಸದ್ಯ, ತಾನು ಚೇತರಿಸಿಕೊಂಡಿದ್ದು, ಚಿತ್ರೀಕರಣಕ್ಕೆ ತೆರಳಲು ಆರಂಭಿಸಿರುವುದಾಗಿಯೂ ಅವರು ತಿಳಿಸಿದ್ದಾರೆ.
ಆರೋಪಿಯೊಂದಿಗಿನ ವಾಟ್ಸ್ ಆ್ಯಪ್ ಚಾಟ್ ಸ್ಕ್ರೀನ್ಶಾಟ್ ಗಳನ್ನು ಕೂಡಾ ನಟಿ ಹಂಚಿಕೊಂಡಿದ್ದು, ಅನೂಪ್ ಎರಡನೇ ಬಾರಿಗೆ ತನ್ನ ಮೇಲೆ ಹಲ್ಲೆ ಮಾಡಿದಾಗ ತಾನು ಬೆಂಗಳೂರಿನಲ್ಲಿ ಪೊಲೀಸರಿಗೆ ದೂರು ನೀಡಿದ್ದೇನೆ, ಆದರೆ ಆತ ವಿಷಯವನ್ನು ಇತ್ಯರ್ಥಗೊಳಿಸಲು ಪೊಲೀಸರಿಗೆ "ಲಂಚ" ನೀಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಅದಕ್ಕೂ ಮೊದಲು ಆತ ತನ್ನ ಮೇಲೆ ಚೆನ್ನೈಯಲ್ಲಿ ಮೊದಲ ಬಾರಿಗೆ ಹಲ್ಲೆ ನಡೆಸಿದ್ದ ಎಂದು ನಟಿ ತಿಳಿಸಿದ್ದಾರೆ.
"ಆತ ನನಗೆ ಈ ರೀತಿ ಮಾಡುತ್ತಾನೆ ಎಂದು ನಾನು ನನ್ನ ಕನಸಿನಲ್ಲಿಯೂ ಎಣಿಸಿರಲಿಲ್ಲ” ಎಂದು ಅನಿಕಾ ಹೇಳಿದ್ದಾರೆ.
ಶೂಟಿಂಗ್ಗೆ ಹೋಗುವುದನ್ನು ತಡೆಯಲು ಆತ ತನ್ನ ಫೋನ್ ಅನ್ನು ಒಡೆದು ಹಾಕಿದ್ದಾನೆ ಎಂದು ಅನಿಕಾ ಆರೋಪಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿಯಲ್ಲಿ ನಾಲ್ಕೈದು ಜನ ಹಾಲಿ ಶಾಸಕರಿಗೆ ಟಿಕೆಟ್ ಇಲ್ಲ: ಬಿ.ಎಸ್.ಯಡಿಯೂರಪ್ಪ







