ಬೇಡಿಕೆ ಈಡೇರಿಸದ ಆಡಳಿತರೂಢ ಪಕ್ಷಕ್ಕೆ ಬಂಟರ ಸಾಮರ್ಥ್ಯ ತೋರಿಸುವ ಅನಿವಾರ್ಯತೆ: ಸಮಸ್ತ ಬಂಟರ ಸಂಘಟನೆಗಳ ಎಚ್ಚರಿಕೆ

ಉಡುಪಿ : ಹಿಂದುಳಿದ ವರ್ಗದ 3ಬಿಯಲ್ಲಿದ್ದ ಮೀಸಲಾತಿಯನ್ನು 2ಎ ವರ್ಗಕ್ಕೆ ಸೇರಿಸುವುದು ಮತ್ತು ನಿಗಮ ಸ್ಥಾಪನೆಯ ಬೇಡಿಕೆಗೆ ರಾಜ್ಯ ಸರಕಾರ ಸ್ಪಂದಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಬಂಟರ ಮತದಾರರು ಹೆಚ್ಚು ಇರುವ ಕ್ಷೇತ್ರಗಳಲ್ಲಿ ಬಂಟರ ಪ್ರಮುಖರನ್ನು ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಸಲಾಗುವುದು ಎಂದು ಸಮಸ್ತ ಬಂಟರ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಹಾಗೂ ಉಡುಪಿ ಬಂಟರ ಸಂಘದ ಗೌರವಾಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಮುಂದಿನ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಕನಿಷ್ಠ ಪಕ್ಷ 20 ಕ್ಷೇತ್ರಗಳಲ್ಲಿ ನಮ್ಮ ಬಂಟರ ಸಾಮರ್ಥ್ಯ ವನ್ನು ನಮ್ಮ ಬೇಡಿಕೆಯನ್ನು ಈಡೇರಿಸದೆ ತಿರಸ್ಕರಿಸಿದ ಆಡಳಿತರೂಢ ಪಕ್ಷಕ್ಕೆ ನೇರವಾಗಿ ತೋರಿಸಬೇಕಾದ ಅನಿವಾರ್ಯತೆ ಬರಬಹುದು ಎಂದು ಎಚ್ಚರಿಕೆ ನೀಡಿದರು.
ಈ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ ಎಂಬುದು ಮುಖ್ಯವಲ್ಲ. ಗೆಲ್ಲುವವರನ್ನು ಸೋಲಿಸುವ ಹಾಗೂ ಸೋಲುವವರನ್ನು ಗೆಲ್ಲಿಸುವ ಶಕ್ತಿ ಬಂಟ ಸಮುದಾಯಕ್ಕೆ ಇದೆ ಎಂಬುದನ್ನು ತೋರಿಸಿಕೊಡುತ್ತೇವೆ. ರಾಜ್ಯ ಸರಕಾರಕ್ಕೆ ರಾಜಕೀಯ ಇಚ್ಛಾಶಕ್ತಿ ಇದ್ದರೆ ನಮ್ಮ ಬೇಡಿಕೆ ಪೂರೈಸಲು ಇನ್ನೂ ಅವಕಾಶ ಇದೆ. ಇಲ್ಲದಿದ್ದರೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಜಾಗತಿಕ ಮಟ್ಟದ ಎಲ್ಲ ಬಂಟರ ಸಂಘಟನೆಗಳು ಹೋರಾಟ ಮಾಡಲು ಸಿದ್ಧವಾಗಿವೆ ಎಂದರು.
ಅವಿಭಜಿತ ದ.ಕ. ಜಿಲ್ಲೆಯಲ್ಲಿ 30 ಲಕ್ಷಕ್ಕೂ ಅಧಿಕ ಬಂಟರ ಜನಸಂಖ್ಯೆ ಇದೆ. ಇದರಲ್ಲಿ ಸುಮಾರು ಶೇ.೯೦ರಷ್ಟು ಬಂಟರು ಬಡ ಮತ್ತು ಮಧ್ಯಮ ವರ್ಗ ದಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಬಂಟರು ಕೃಷಿಯನ್ನೇ ಬಹು ಪ್ರಧಾನ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಬಂಟರ ಬೇಡಿಕೆ ಈಡೇರಿಸುವ ಬಗ್ಗೆ ಸರಕಾರದ ಭರವಸೆಯನ್ನು ನಂಬಿ ಇಡೀ ಸಮುದಾಯ ಜಾತಕ ಪಕ್ಷಿಯಂತೆ ಕಾದು ಕುಳಿತಿದೆ. ಆದರೆ ಈ ಸರಕಾರದ ಅವಧಿ ಮುಗಿಯುತ್ತ ಬಂದರೂ ಸಮುದಾಯದ ಬೇಡಿಕೆಗಳ ಬಗ್ಗೆ ಸರಕಾರ ಗಂಭೀರ ಮೌನ ವಹಿಸಿರುವುದು ಬೇಸರ ತಂದಿದೆ.
ಬೇರೆ ಎಲ್ಲ ಜಾತಿಯವರ ಬೇಡಿಕೆಗಳಿಗೆ ಸರಕಾರ ಸ್ಪಂದಿಸುತ್ತಾ ಬಂದಿರುವಾಗ ನಮ್ಮ ಎರಡು ಬೇಡಿಕೆಗಳನ್ನು ನಿರ್ಲಕ್ಷಿಸಿರುವುದು ಸರಿಯಲ್ಲ. ಈ ಮೂಲಕ ನಾವು ಈ ದೇಶದ ಮತದಾರರು ಅಲ್ಲವೇ ಎಂಬ ಪ್ರಶ್ನೆ ಕಾಡಲು ಆರಂಭಿಸಿದೆ. ಬಂಟರಿಗೆ ಮೀಸಲಾತಿ ಇಲ್ಲದ ಕಾರಣದಿಂದ ಸಾಕಷ್ಟು ಪ್ರತಿಭಾವಂತ ಮಕ್ಕಳು ಸರಕಾರಿ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಬಂಟರ ಆರ್ಥಿಕ ಸ್ಥಿತಿಗತಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಆದುದ ರಿಂದ ಬಂಟರಿಗೊಂದು ನಿಗಮ ರಚನೆ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ಬಂಟರ ಸಂಘದ ಉಪಾಧ್ಯಕ್ಷರಾದ ಸುರೇಶ್ ಶೆಟ್ಟಿ, ಮೋಹನ್ ಶೆಟ್ಟಿ, ನಿವೃತ್ತ ಪ್ರಾಧ್ಯಾಪಕ ಕೆ.ಸುರೇಂದ್ರನಾಥ ಶೆಟ್ಟಿ, ತೋನ್ಲೆ ವಲಯ ಬಂಟರ ಸಂಘದ ಅಧ್ಯಕ್ಷ ತೋನ್ಸೆ ಮನೋಹರ್ ಶೆಟ್ಟಿ, ಕೊಡವೂರು ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಉಡುಪಿ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಅಮಿತ್ ಕುಮಾರ್ ಶೆಟ್ಟಿ, ಕೃಷ್ಣ ಕುಮಾರ್ ಶೆಟ್ಟಿ ಹಾಜರಿದ್ದರು.
‘ನಮ್ಮ ಶಾಸಕರ ವಿರುದ್ಧವೇ ಹೋರಾಟ’
ನಮ್ಮ ಸಮುದಾಯದಲ್ಲಿ ಸಾಕಷ್ಟು ಮಂದಿ ಶಾಸಕರು ಇದ್ದರೆ ಮತ್ತು ಲೋಕ ಸಭಾ ಸದಸ್ಯರು ಕೂಡ ಇದ್ದಾರೆ. ಈ ಬೇಡಿಕೆ ಈಡೇರಿಸುವಂತೆ ಇವರ ವಿರುದ್ಧ ನಾವು ಹೋರಾಟ ಮಾಡಿ ಒತ್ತಡ ತರುತ್ತಿದ್ದೇವೆ ಎಂದು ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.
ನಮ್ಮ ಶ್ರಮದಿಂದ ಆಯ್ಕೆಯಾದ ಬಂಟ ಸಮುದಾಯದ ಶಾಸಕರು ನಮ್ಮ ಬೇಡಿಕೆ ಈಡೇರಿಸಲು ಸರಕಾರಕ್ಕೆ ಒತ್ತಡ ತರುವ ಕೆಲಸ ಮಾಡಬೇಕಾಗಿತ್ತು. ಆದರೆ ಇಂದು ನಮ್ಮ ಸಂಘಟನೆಗಳು ಆ ಕೆಲಸಗಳನ್ನು ಮಾಡುತ್ತಿವೆ. ನಮ್ಮ ಸಮುದಾಯದ ಶಾಸಕರು ಆಯ್ಕೆಯಾದ ನಂತರ ಬಂಟರ ಪ್ರಗತಿ ಬಗ್ಗೆ ಯಾವುದೇ ಚಿಂತನೆ ಮಾಡಿಲ್ಲ ಎಂದು ಅವರು ದೂರಿದರು.