ಜನೌಷಧ ಕೇಂದ್ರಗಳಲ್ಲಿ ಶೇ.60ರಷ್ಟು ಕಡಿಮೆ ಬೆಲೆಯಲ್ಲಿ ಔಷಧಿ ಲಭ್ಯ: ಉಡುಪಿ ಡಿಎಚ್‌ಓ

ಉಡುಪಿ, ಮಾ.7: ಜನೌಷಧ ಕೇಂದ್ರಗಳಲ್ಲಿ ಶೇ.50-60ರಷ್ಟು ಕಡಿಮೆ ಬೆಲೆಯಲ್ಲಿ ಔಷಧಿಗಳು ಲಭ್ಯವಿದ್ದು, ಇದರಿಂದ ಜನಸಾಮಾನ್ಯರಿಗೆ ವೆಚ್ಚದ ಉಳಿತಾಯವಾಗಲಿದೆ. ಜಿಲ್ಲೆಯಲ್ಲಿ 49 ಜನೌಷಧಿ ಕೇಂದ್ರಗಳು ಕಾರ್ಯನಿರ್ವ ಹಿಸುತ್ತಿದ್ದು, ಗಾಮೀಣ ಪ್ರದೇಶದಲ್ಲಿಯೂ ಜನೌಷಧಿ ಕೇಂದ್ರಗಳನ್ನು ಪ್ರಾರಂಭಿಸ ಲಾಗಿದೆ. ಇದು ದೇಶದ ವೈದ್ಯಕೀಯ ಕ್ಷೇತ್ರದಲ್ಲಿ ಸಾಧಿಸಿದ ಮೈಲಿಗಲ್ಲು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಔಷಧ ನಿಯಂತ್ರಣ ಇಲಾಖೆ, ಜಿಲ್ಲಾಸ್ಪತ್ರೆ, ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ಹಾಗೂ ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಇವರ ಸಹಯೋಗದೊಂದಿಗೆ ಅಜ್ಜರಕಾಡುವಿನಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯ ಶ್ರೀಕೃಷ್ಣ ಸಭಾಂಗಣದಲ್ಲಿ ನಡೆದ ಜನಔಷಧಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಾರ್ವಜನಿಕರಿಗೆ, ಬಡವರಿಗೆ, ರೈತಾಪಿ ವರ್ಗದವರಿಗೆ ಹಾಗೂ ಮಧ್ಯಮ ವರ್ಗದವರಿಗೆ ನಿರಂತರವಾಗಿ ಕಡಿಮೆ ಬೆಲೆಯಲ್ಲಿ ಔಷಧಿಗಳು ಲಭ್ಯವಾಗ ಬೇಕೆಂಬ ಉದ್ದೇಶದಿಂದ ಕೇಂದ್ರ ಸರಕಾರವು ಜನೌಷಧಿ ಕೇಂದ್ರಗಳನ್ನು ಪ್ರಾರಂಭಿಸಿದ್ದು, ಜನೌಷಧಿಯು ಭಾರತ ದೇಶದಲ್ಲಿ ಔಷಧ ಉತ್ಪಾದನೆ ಹಾಗೂ ವಿತರಣೆಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತಂದಿದೆ ಎಂದರು.
ಎಲ್ಲರಿಗೂ ಆರೋಗ್ಯ ಎಲ್ಲೆಡೆ ಆರೋಗ್ಯ ಎಂಬ ಧ್ಯೇಯವಾಕ್ಯದೊಂದಿಗೆ, ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ ಹಾಗೂ ಉಚಿತ ಔಷದ ನೀಡುವುದು ಸರಕಾರದ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ಕ್ಷೇಮ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು, ಜಿಲ್ಲಾಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದ್ದು, ಗಂಭೀರ ಕಾಯಿಲೆಗಳಿಗೆ ಆಯುಷ್ಮಾನ್ ಭಾರತ್ ಯೋಜನೆ ಯಡಿ ಕೂಡ ಉಚಿತ ಚಿಕಿತ್ಸೆ ಲಭ್ಯವಿದೆ ಎಂದರು.
ಜಿಲ್ಲಾ ಸಹಾಯಕ ಔಷಧ ನಿಯಂತ್ರಕ ಶಂಕರ್ ನಾಯಕ್ ಮಾತನಾಡಿ, ಜನೌಷಧಿ ಯೋಜನೆಯ ಕುರಿತು ಜನರಿಗೆ ಅರಿವು ಮೂಡಿಸಿ, ಅದರ ಪ್ರಯೋಜನ ಪಡೆಯುವ ನಿಟ್ಟಿನಲ್ಲಿ ಕರ್ನಾಟಕವು ದೇಶದಲ್ಲೇ ಎರಡನೇ ಸ್ಥಾನ ಪಡೆದಿದೆ. ಔಷಧಗಳ ಬೆಲೆ ಕಡಿಮೆ ಇರುವ ಕಾರಣ ಜನರಿಗೆ ಔಷಧಿಯ ಗುಣಮಟ್ಟದ ಬಗ್ಗೆ ಗೊಂದಲವಿದ್ದು, ಈ ಬಗ್ಗೆ ಇಲಾಖೆ ವತಿಯಿಂದ ಔಷಧಗಳ ಗುಣಮಟ್ಟವನ್ನು ಆಗಿಂದಾಗ್ಗೆ ಪರೀಕ್ಷಿಸಲಾಗುತ್ತಿದೆ. ಕ್ಯಾನ್ಸರ್ ರೋಗಕ್ಕೆ ಉಪಯೋಗಿಸುವ ದುಬಾರಿಯಾದ ಔಷಧಗಳು ಕಡಿಮೆದರದಲ್ಲಿ ಜನೌಷಧಿ ಕೇಂದ್ರಗಳಲ್ಲಿ ಲ್ಯವಿದೆ ಎಂದರು.
ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಬಾಳಿಗ ಆಸ್ಪತ್ರೆಯ ಡಾ.ಪಿ.ವಿ.ಭಂಡಾರಿ, ಡಾ.ವೀಣಾ, ವಿವೇಕ್‌ಕಾಮತ್, ಪ್ರೊ.ಶಶಿರೇಖಾ, ವಿವಿಧ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಜನೌಷಧಿ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಾವರ ಜಯಂಟ್ಸ್ ಗ್ರೂಪ್ ಅಧ್ಯಕ್ಷ ಸುಂದರ್ ಪೂಜಾರಿ ಮೂಡುಕುಕ್ಕುಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ ದರು, ಆನಂದ್ ಜತ್ತನ್ ನಿರೂಪಿಸಿ, ಮಧುಸೂದನ ಹೇರೂರು ವಂದಿಸಿದರು.