ಬೀದಿಬದಿ ವ್ಯಾಪಾರಿಗಳ ಮೇಲೆ ಕಾನೂನುಬಾಹಿರ ಕಾರ್ಯಾಚರಣೆ ವಿರೋಧಿಸಿ ಪ್ರತಿಭಟನೆ

ಮಂಗಳೂರು, ಮಾ.7: ಬೀದಿಬದಿ ವ್ಯಾಪಾರಿಗಳ ಮೇಲೆ ಕಾನೂನು ಬಾಹಿರ ಕಾರ್ಯಾಚರಣೆ ವಿರೋಧಿಸಿ ಮಂಗಳವಾರ ಬೀದಿಬದಿ ವ್ಯಾಪಾರಿಗಳು ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ನೇತೃತ್ವದಲ್ಲಿ ಲಾಲ್‌ಭಾಗ್‌ನಲ್ಲಿರುವ ಮಹಾನಗರ ಪಾಲಿಕೆ ಕಚೇರಿ ಎದುರುಗಡೆ ಬೃಹತ್ ಪ್ರತಿಭಟನೆ ನಡೆಸಿದರು.
ಬೀದಿಬದಿ ವ್ಯಾಪಾರಿಗಳು ಬಲ್ಲಾಳ್ ಭಾಗ್ ಜಂಕ್ಷನ್ ನಿಂದ ಮೆರವಣಿಗೆ ಹೊರಟು ಮಹಾನಗರ ಪಾಲಿಕೆ ಕಚೇರಿ ಎದುರುಗಡೆ ಬೃಹತ್ ಪ್ರತಿಭಟನೆ ನಡೆಸಿದರು. ಪಟ್ಟಣ ವ್ಯಾಪಾರ ಸಮಿತಿ (ಟಿವಿಸಿ) ಸಭೆ ಕರೆಯಬೇಕು, ಪಟ್ಟಣ ವ್ಯಾಪಾರಿಗಳ ಕುಂದುಕೊರತೆಗಳ ನಿವಾರಣೆಗೆ ನಿವೃತ್ತ ಜಡ್ಜ್ ನೇತೃತ್ವದ ಸಮಿತಿ ನೇಮಕ ಮಾಡಬೇಕು, ಬೀದಿ ಬದಿ ಆಹಾರ ಮಾರಾಟಗಾರರಿಗೆ 10 ದಿನಗಳ ತರಬೇತಿ ಕಾರ್ಯಾಗಾರ ಅಗತ್ಯ , ಬೀದಿ ಬದಿ ವ್ಯಾಪಾರಿಗಳ ಮೇಲೆ ಕಾನೂನುಬಾಹಿರ ದಾಳಿ ನಿಲ್ಲಿಸಬೇಕು, ಬೀದಿ ಬದಿ ವ್ಯಾಪಾರಿಗಳಿಗೆ ಗುರುತುಚೀಟಿ ಮತ್ತು ಪ್ರಮಾಣ ಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಉಪ ಆಯುಕ್ತ ರವಿಕುಮಾರ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮನವಿ ಸಲ್ಲಿಸಿದರು.
ಬೀದಿ ವ್ಯಾಪಾರಿಗಳ ಮನವಿ ಸ್ವೀಕರಿಸಿದ ಉಪ ಆಯುಕ್ತರು ಅವರ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆಕಾರರು ತಮ್ಮ ಪ್ರತಿಭಟನೆಯನ್ನು ವಾಪಸ್ ಪಡೆದರು. ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಸುಕುಮಾರ ತೊಕ್ಕೊಟ್ಟು, ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ಮುಹಮ್ಮದ್ ಮುಸ್ತಫ, ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ, ಮುಖಂಡರಾದ ಪಿ.ಎಸ್. ಶಂಕರ್, ಶ್ರೀಧರ ಭಂಡಾರಿ, ಸಂತೋಷ್ ಆರ್ .ಎಸ್, ಆಸಿಫ್ ಬಾವ ಉರುಮನೆ, ಜಗದೀಶ್ ಬಜಾಲ್ , ಇಸ್ಮಾಯೀಲ್ ಉಳ್ಳಾಲ, ಅಬ್ದುಲ್ ರಹಮಾನ್ ಅಡ್ಯಾರ್, ನೌಶಾದ್ ಉಳ್ಳಾಲ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.







