ನಾನು ಯಾರಿಗೂ, ಎಲ್ಲೂ ಒತ್ತಡ ಹಾಕಿಲ್ಲ: ದ.ಕ. ಜಿಲ್ಲಾಧಿಕಾರಿ ರವಿಕುಮಾರ್
ದೂರು ಹೋಗಿರುವ ಬಗ್ಗೆ ಡಿಸಿ ಪ್ರತಿಕ್ರಿಯೆ

ಮಂಗಳೂರು: ಸಾರ್ವಜನಿಕರ ಅರ್ಜಿಗಳ ಶೀಘ್ರ ವಿಲೇವಾರಿಗೆ ಒತ್ತಡ ಹಾಕಿದ್ದು ನಿಜ. ಬೇರೆ ಯಾವುದೇ ಉದ್ದೇಶಗಳಿಗೆ ನಾನು ಯಾರಿಗೂ, ಎಲ್ಲೂ ಒತ್ತಡ ಹಾಕಿಲ್ಲ ಎಂದು ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಸ್ಪಷ್ಟಪಡಿಸಿದ್ದಾರೆ.
ʼವಾರ್ತಾಭಾರತಿʼಯೊಂದಿಗೆ ಮಂಗಳವಾರ ಮಾತನಾಡಿದ ಅವರು ರಾಜಕೀಯ ಪ್ರಭಾವಕ್ಕೆ ಒಳಗಾಗಿ ಕಡತಗಳನ್ನು ನಿಯಮ ಮೀರಿ ವಿಲೇವಾರಿ ಮಾಡಲು ಡಿಸಿ ಒತ್ತಡ ಹೇರುತ್ತಿರುವುದಾಗಿ ಮತ್ತು ರಾಜಕೀಯ ವ್ಯಕ್ತಿಗಳ ಕೈಗೊಂಬೆಯಂತೆ ವರ್ತಿಸುತ್ತಿರುವುದಾಗಿ ಆರೋಪಿಸಿ ಸರಕಾರದ ಮುಖ್ಯ ಕಾರ್ಯದರ್ಶಿಗೆ ಜಿಲ್ಲೆಯ ಕೆಲವು ಅಧಿಕಾರಿಗಳು ಹಾಗೂ ಕೆಲವು ಸಿಬ್ಬಂದಿ ದೂರು ನೀಡಿದ್ದಾರೆಂದು ಪತ್ರಿಕೆ, ಮಾಧ್ಯಮಗಳಲ್ಲಿ ಬಂದಿರುವ ವರದಿಯ ಬಗ್ಗೆ ಪ್ರತಿಕ್ರಿಯೆ ನೀಡಿದರು.
ನನ್ನ ವಿರುದ್ಧ ಸರಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಹೋಗಿರುವ ಬಗ್ಗೆ ಮಾಹಿತಿ ಇಲ್ಲ. ಮಾಹಿತಿಗಾಗಿ ಕಾಯುತ್ತಿರುವೆನು. ಈ ಮಾಹಿತಿ ದೃಢಪಟ್ಟ ಬಳಿಕ ಮಾತನಾಡುವೆನು. ದೂರಿನ ಕುರಿತು ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಮೈಸೂರಿನ ಪ್ರಾದೇಶಿಕ ಆಯುಕ್ತರಿಗೆ ಕಂದಾಯ ಇಲಾಖೆ ಸೂಚಿಸಿರುವ ವಿಚಾರ ನನಗೆ ಗೊತ್ತಿಲ್ಲ. ಈ ಬಗ್ಗೆ ಎಲ್ಲವನ್ನು ತಿಳಿದುಕೊಂಡು ಸಂಪೂರ್ಣ ಮಾಹಿತಿಯೊಂದಿಗೆ ಎರಡು ದಿನಗಳ ಒಳಗಾಗಿ ಸ್ಪಷ್ಟನೆ ನೀಡುವುದಾಗಿ ತಿಳಿಸಿದರು.
ರಾಜಕೀಯ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗಿ ಪ್ರಮುಖ ಕಡತಗಳನ್ನು ನಿಯಮ ಮೀರಿ ವಿಲೇವಾರಿ ಮಾಡಲು ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ನಿರಾಧಾರ, ತಾನು ಯಾವುದೇ ರಾಜಕೀಯ ಒತ್ತಡಗಳಿಗೂ ಮಣಿದಿಲ್ಲ. ಇಲ್ಲಿ ಅಂತಹ ರಾಜಕೀಯ ಒತ್ತಡ ಇಲ್ಲ ಎಂದರು.
ನನ್ನ ವಿರುದ್ಧ ದೂರು ಸಲ್ಲಿಕೆಯಾಗಿರುವ ಬಗ್ಗೆ ಮಾಹಿತಿ ಎಲ್ಲಿಯೂ ಇಲ್ಲ. ಅಂತಹ ಮಾಹಿತಿ ಮಾಧ್ಯಮಗಳಿಗೆ ಹೇಗೆ ಹೋಯಿತು ಎಂಬ ಬಗ್ಗೆ ನನಗೆ ಆಶ್ಚರ್ಯವಾಗುತ್ತಿದೆ ಎಂದು ಹೇಳಿದರು.