ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಚನ್ನಗಿರಿಯಲ್ಲೇ ಇದ್ದರೂ ಪೊಲೀಸರು ಬಂಧಿಸಿರಲಿಲ್ಲ ಏಕೆ?: ಕಾಂಗ್ರೆಸ್
''ಶಾಸಕರ ಮೆರವಣಿಗೆ ರಾಜ್ಯದ ಜನತೆಗೆ ಮಾಡುವ ಅಪಮಾನ''

ಬೆಂಗಳೂರು, ಮಾ. 7: ‘ಲೋಕಾಯುಕ್ತ ಪೊಲೀಸರ ಕೈಗೆ ಸಿಗದಿದ್ದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಜಾಮೀನು ಸಿಕ್ಕ ಕೆಲವೇ ಗಂಟೆಗಳಲ್ಲಿ ಪ್ರತ್ಯಕ್ಷರಾಗುತ್ತಾರೆ. ಮೆರವಣಿಗೆ ಮಾಡಿ ಪೊಲೀಸರಿಗೆ ಸೆಡ್ಡು ಹೊಡೆಯುತ್ತಾರೆ. ಬಿಜೆಪಿಗರು ಬಾವುಟ ಹಿಡಿದು ಸಂಭ್ರಮಿಸುತ್ತಾರೆ. ಇದು ರಾಜ್ಯದ ಜನತೆಗೆ ಮಾಡುವ ಅಪಮಾನ. ಬಿಜೆಪಿಯು ಕಾನೂನಿನ ಅಣಕವಾಡುತ್ತಿದೆ’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಮಾಡಾಳ್ ವೀರೂಪಾಕ್ಷಪ್ಪ ಜಾಮೀನು ನೀಡಿಕೆಯ ವಿರುದ್ಧ ಸರಕಾರ ಸಮರ್ಥವಾಗಿ ವಾದ ಮಂಡಿಸಲೇ ಇಲ್ಲ. ಲೋಕಾಯುಕ್ತ ಪರ ವಕೀಲರು ಕೋರ್ಟಿಗೆ ಹಾಜರಾಗಿರಲೇ ಇಲ್ಲ. ಧಿಡೀರ್ ತನಿಖಾಧಿಕಾರಿಗಳನ್ನು ಬದಲಿಸಲಾಗುತ್ತದೆ. ಮಾಡಾಳ್ ಚನ್ನಾಗಿರಿಯಲ್ಲೇ ಇದ್ದರೂ ಪೊಲೀಸರು ಬಂಧಿಸಿರಲಿಲ್ಲ. ಬಸವರಾಜ ಬೊಮ್ಮಾಯಿ ಅವರೇ, ತುಂಬಾ ಚೆನ್ನಾಗಿದೆ ನಿಮ್ಮ ಸದಾರಮೆ ನಾಟಕ!’ ಎಂದು ಲೇವಡಿ ಮಾಡಿದೆ.
‘ಮಾಡಾಳ್ ವೀರೂಪಾಕ್ಷಪ್ಪನವರ ಹಗರಣದ ತನಿಖೆ ನಡೆಸುತ್ತಿದ್ದ ತನಿಖಾಧಿಕಾರಿಗಳನ್ನು ಏಕಾಏಕಿ ಬದಲಿಸಲಾಗಿದೆ. ಒಂದು ವಾರವಾದರೂ ಆರೋಪಿ ಶಾಸಕರನ್ನು ಬಂಧಿಸಿರಲಿಲ್ಲ. ನಿರೀಕ್ಷಣಾ ಜಾಮೀನು ದೊರಕುತ್ತಿದ್ದಂತೆಯೇ ಮಾಡಾಳ್ ಪ್ರತ್ಯಕ್ಷರಾಗುತ್ತಾರೆ. ಆದರೂ ಬಸವರಾಜ ಬೊಮ್ಮಾಯಿ ಅವರು ಭ್ರಷ್ಟರ ರಕ್ಷಣೆ ಮಾಡುತ್ತಿಲ್ಲ ಎಂಬುದನ್ನು ರಾಜ್ಯದ ಜನತೆ ನಂಬಬೇಕು’ ಎಂದು ಕಾಂಗ್ರೆಸ್ ಟೀಕಿಸಿದೆ.
‘ನಾನು ಎಲ್ಲೂ ತಲೆಮರೆಸಿಕೊಂಡಿರಲಿಲ್ಲ ಚನ್ನಗಿರಿಯಲ್ಲೇ ಇದ್ದೆ’-ಮಾಡಾಳ್ ವಿರೂಪಾಕ್ಷಪ್ಪ. ಚನ್ನಗಿರಿಯಲ್ಲೇ ಇದ್ದರೂ ಪೊಲೀಸರು ಬಂಧಿಸಿರಲಿಲ್ಲ ಏಕೆ?, ಬಂಧಿಸದಂತೆ ನೋಡಿಕೊಂಡವರು ಯಾರು?, ಇಂಟಲಿಜೆನ್ಸ್ ಹಾಗೂ ಪೊಲೀಸರು ಇಷ್ಟೊಂದು ಅಸಮರ್ಥರೇ? ಬಸವರಾಜ ಬೊಮ್ಮಾಯಿ ಅವರು ರಾಜ್ಯಕ್ಕೆ ಉತ್ತರಿಸಲೇಬೇಕು?’ ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಉಚ್ಛಾಟನೆ: ಬಿಜೆಪಿಯಲ್ಲಿ ಭ್ರಷ್ಟರನ್ನು ಉಚ್ಛಾಟಿಸುವುದಾದರೆ ಶೇ.90ರಷ್ಟು ನಾಯಕರು ಖಾಲಿಯಾಗುತ್ತಾರೆ. ಬರಿ ವಿರೂಪಾಕ್ಷಪ್ಪರನ್ನೇ ಏಕೆ, ಕೋವಿಡ್ ಹಗರಣದ ಡಾ.ಕೆ.ಸುಧಾಕರ್, ಪಿಎಸ್ಸೈ ಹಗರಣದ ಡಾ.ಅಶ್ವತ್ಥ ನಾರಾಯಣ, ಶೇ.40 ಕಮಿಷನ್ ಹಗರಣದ ಈಶ್ವರಪ್ಪ, ಮುನಿರತ್ನ, ಟೂಲ್‍ಕಿಟ್ ಹಗರಣದ ಶಿವರಾಂ ಹೆಬ್ಬಾರ್, ಕಾಕಂಬಿ ಹಗರಣದ ಬಸವರಾಜ ಬೊಮ್ಮಾಯಿ ಸೇರಿ ಎಲ್ಲರನ್ನೂ ಉಚ್ಚಾಟಿಸಬೇಕಾಲ್ಲವೇ?’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
‘ಕಾಂಗ್ರೆಸ್ ಘೋಷಿಸಿದ 200ಯೂನಿಟ್ ಉಚಿತ ವಿದ್ಯುತ್ ಕೊಡಲು ಸಾಧ್ಯವೇ ಇಲ್ಲ ಎನ್ನುತ್ತಿದೆ ಬಿಜೆಪಿ. ವಿದ್ಯುತ್ ಸೋರಿಕೆ ತಡೆಗಟ್ಟಿದರೆ, ಇಂಧನ ಇಲಾಖೆಯಲ್ಲಿನ ಶೇ.40ರಷ್ಟು ಭ್ರಷ್ಟಾಚಾರ ತಡೆಗಟ್ಟಿದರೆ, ದೊಡ್ಡ ಕುಳಗಳ ಸಾವಿರಾರು ಕೋಟಿ ರೂ.ಬಿಲ್ ಬಾಕಿ ವಸೂಲಿ ಮಾಡಿದರೆ ಅಸಾಧ್ಯ ಯಾವುದೂ ಇಲ್ಲ. ರೈತರಿಗೆ ಉಚಿತ ವಿದ್ಯುತ್ ನೀಡಿದ ಇತಿಹಾಸವಿದೆ ನಮಗೆ’
-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ
"ನಾನು ಎಲ್ಲೂ ತಲೆಮರೆಸಿಕೊಂಡಿರಲಿಲ್ಲ ಚನ್ನಗಿರಿಯಲ್ಲೇ ಇದ್ದೆ"
— Karnataka Congress (@INCKarnataka) March 7, 2023
- ಮಾಡಾಳ್ ವೀರೂಪಾಕ್ಷಪ್ಪ
ಚನ್ನಗಿರಿಯಲ್ಲೇ ಇದ್ದರೂ ಪೊಲೀಸರು ಬಂಧಿಸಿರಲಿಲ್ಲ ಏಕೆ?
ಬಂಧಿಸದಂತೆ ನೋಡಿಕೊಂಡವರು ಯಾರು?
ಇಂಟಲಿಜೆನ್ಸ್ ಹಾಗೂ ಪೊಲೀಸರು ಇಷ್ಟೊಂದು ಅಸಮರ್ಥರೇ?@BSBommai ಅವರು ರಾಜ್ಯಕ್ಕೆ ಉತ್ತರಿಸಲೇಬೇಕು?#40PercentSarkara







