ಕೊಳ್ಳೇಗಾಲ | ಅಂತರ್ಜಾತಿ ವಿವಾಹ ಆಗಿದ್ದಕ್ಕೆ ದಂಡ, ಗ್ರಾಮದಿಂದ ಬಹಿಷ್ಕಾರ: ಕುಟುಂಬಕ್ಕೆ ರಕ್ಷಣೆ ನೀಡಲು ಆಗ್ರಹ

ಬೆಂಗಳೂರು, ಮಾ.7: ಪರಿಶಿಷ್ಟ ಜಾತಿಯ ಯುವತಿಯನ್ನು ವಿವಾಹ ಮಾಡಿಕೊಂಡು ಊರಿಗೆ ಬಂದ ಉಪ್ಪಾರ ಸಮುದಾಯದ ಯುವಕನಿಗೆ ಕುಲಪಂಚಾಯಿತಿಯು ದಂಡ ವಿಧಿಸಿದ್ದು, ದಂಪತಿಗೆ ಹಾಗೂ ಅವರ ಕುಟುಂಬಕ್ಕೆ ಸರಕಾರ ರಕ್ಷಣೆ ನೀಡಬೇಕು ಎಂದು ಅಖಿಲ ಭಾರತ ಪ್ರಗತಿಪರರ ಮಹಿಳಾ ಸಂಘಟನೆ ಆಗ್ರಹಿಸಿದೆ.
2018ರಲ್ಲಿ ಪರಿಶಿಷ್ಟ ಜಾತಿಯ ಹೆಣ್ಣು ಮಗಳನ್ನು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದ ಉಪ್ಪಾರ ಸಮುದಾಯದ ಗೋವಿಂದ ರಾಜು ಎಂಬುವವರು ವಿವಾಹವಾಗಿದ್ದರು. ಆಗ ಉಪ್ಪಾರ ಸಮುದಾಯದ ಕುಲಪಂಚಾಯತಿ ಗೋವಿಂದ ರಾಜು ಕುಟುಂಬಕ್ಕೆ 1.5ಲಕ್ಷ ರೂ.ಗಳ ದಂಡ ವಿಧಿಸಿ, ಕುಟುಂಬಕ್ಕೆ ಬಹಿಷ್ಕಾರ ಹಾಕಿತ್ತು. ಹಾಗಾಗಿ ದಂಪತಿಗಳು ಊರು ಬಿಟ್ಟು ಬೇರೆ ಕಡೆ ವಾಸವಾಗಿದ್ದರು.
ಫೆ.13ರಂದು ತಮ್ಮ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಗೋವಿಂದ ರಾಜು ತನ್ನ ಪತ್ನಿಯೊಂದಿಗೆ ಕುಣಗಳ್ಳಿಗೆ ಬಂದಿದ್ದರು. ವಿಷಯವನ್ನು ತಿಳಿದ ಕುಲಪಂಚಾಯಿತಿ ಗೋವಿಂದ ರಾಜು ತಂದೆಯನ್ನು ಕರೆದು, ‘ನಿನ್ನ ಮಗ ಪರಿಶಿಷ್ಟ ಜಾತಿಯ ಯುವತಿಯನ್ನು ಊರಿನೊಳಗೆ ಕರೆದುಕೊಂಡು ಬಂದಿದ್ದಾನೆ. ಹಾಗಾಗಿ ನೀನು 5ಲಕ್ಷ ರೂ.ದಂಡವನ್ನು ಪಾವತಿ ಮಾಡಿ, ತಲೆಯನ್ನು ಬೋಳಿಸಿಕೊಳ್ಳಬೇಕು. ಇಲ್ಲವಾದಲ್ಲಿ ಊರಿನಿಂದ ಬಹಿಷ್ಕಾರ ಹಾಕಲಾಗುವುದು ಎಂದು ಬೆದರಿಕೆ ಹಾಕಿದ್ದಾರೆಂದು ವರದಿಯಾಗಿದೆ.
ಈ ವಿಷಯವನ್ನು ತಿಳಿದ ದಂಪತಿಗಳು ಮಾಂಬಳ್ಳಿ ಪೋಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಸಂವಿಧಾನವಿದ್ದರೂ, ಕುಲಪಂಚಾಯಿತಿಯ ಹೆಸರಿನಲ್ಲಿ ಜಾತಿ ವ್ಯವಸ್ಥೆಯನ್ನು ಜೀವಂತವಾಗಿದೆ. ಜಾತಿ ವ್ಯವಸ್ಥೆಯ ನಾಶಕ್ಕೆ ಅಂತರ್ಜಾತಿ ವಿವಾಹವು ಒಂದು ಮಾರ್ಗ ಎಂದು ಡಾ.ಅಂಬೇಡ್ಕರ್ ಸೇರಿದಂತೆ ಸಾಮಾಜಿಕ ಸುಧಾರಕರು ನಂಬಿದ್ದರು. ಆದರೆ ಬ್ರಾಹ್ಮಣ್ಯದ ಸುಳಿಯಲ್ಲಿ ಸಿಲುಕಿರುವ ಹಿಂದುಳಿದ ಜಾತಿಗಳು ತಮ್ಮ ಜಾತಿ ಕ್ರೂರತೆಯನ್ನು ಎತ್ತಿ ತೋರಿಸುದೆ. ನೊಂದ ದಂಪತಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಸರಕಾರ ಸೂಕ್ತ ರೀತಿಯ ರಕ್ಷಣೆಯನ್ನು ಮತ್ತು ಉದ್ಯೋಗಾವಕಾಶವನ್ನು ಕಲ್ಪಿಸಬೇಕು ಎಂದು ಸಂಘಟನೆಯು ಸರಕಾರವನ್ನು ಒತ್ತಾಯಿಸಿದೆ.







