ಉದ್ಯೋಗಗಳಿಗಾಗಿ ಭೂಮಿ ಪ್ರಕರಣ: ರಾಬ್ರಿದೇವಿ ಬೆನ್ನಲ್ಲೇ ಸಿಬಿಐ ನಿಂದ ಲಾಲು ಯಾದವ್ ವಿಚಾರಣೆ

ಹೊಸದಿಲ್ಲಿ,ಮಾ.7: ಉದ್ಯೋಗಗಳಿಗಾಗಿ ಭೂಮಿ ಹಗರಣದಲ್ಲಿ ಸೋಮವಾರ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿದೇವಿಯವರನ್ನು ಅವರ ನಿವಾಸದಲ್ಲಿ ಪ್ರಶ್ನಿಸಿದ್ದ ಸಿಬಿಐ, ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಅವರ ಪತಿ, ಮಾಜಿ ಕೇಂದ್ರ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ರನ್ನು ವಿಚಾರಣೆಗೊಳಪಡಿಸಿದೆ. ದಿಲ್ಲಿಯ ಪಂಡಾರಾ ರೋಡ್ ನಲ್ಲಿರುವ ಲಾಲು ಪುತ್ರಿ ಮಿಸಾ ಭಾರ್ತಿಯವರ ನಿವಾಸದಲ್ಲಿ ಈ ವಿಚಾರಣೆ ನಡೆದಿದೆ.
ಯಾದವ್ ದಂಪತಿ,ಅವರ ಪುತ್ರಿಯರಾದ ಮಿಸಾ ಮತ್ತು ಹೇಮಾ ಹಾಗೂ ಇತರರು ಆರೋಪಿಗಳಾಗಿರುವ ಸಿಬಿಐ ಪ್ರಕರಣವು ಲಾಲು 2004ರಿಂದ 2009ರವರೆಗೆ ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಅವರು ಮತ್ತು ಅವರ ಕುಟುಂಬ ರೈಲ್ವೆ ಇಲಾಖೆಯಲ್ಲಿ ಉದ್ಯೋಗಗಳಿಗೆ ಬದಲಾಗಿ ಆಕಾಂಕ್ಷಿಗಳಿಂದ ಅಗ್ಗದ ದರಗಳಲ್ಲಿ ಭೂಮಿಗಳನ್ನು ಖರೀದಿಸಿತ್ತು ಎಂಬ ಆರೋಪಗಳನ್ನು ಆಧರಿಸಿದೆ.
ಮೇ,2022ರಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ ಭೂಮಿಗೆ ಬದಲಾಗಿ ಉದ್ಯೋಗಗಳನ್ನು ಪಡೆದಿದ್ದ 12 ಜನರನ್ನೂ ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಸಿಬಿಐ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷದ ಜುಲೈನಲ್ಲಿ ಲಾಲು ಸಹಾಯಕ ಹಾಗೂ ಮಾಜಿ ವಿಶೇಷ ಕರ್ತವ್ಯಾಧಿಕಾರಿ ಭೋಲಾ ಯಾದವ್ ಅವರನ್ನು ಬಂಧಿಸಿತ್ತು.
ತನ್ನ ತಂದೆಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿರುವ ಲಾಲು ಪುತ್ರಿ ರೋಹಿಣಿ ಆಚಾರ್ಯ, ಅವರಿಗೇನಾದರೂ ಆದರೆ ಯಾರನ್ನೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿಯ ರಾಜಕೀಯ ಉದ್ದೇಶಗಳಿಗಾಗಿ ಕೇಂದ್ರೀಯ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಲಾಲು ಪ್ರಸಾದ್ ಪುತ್ರ ಹಾಗೂ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಸೇರಿದಂತೆ ಎಂಟು ಪ್ರತಿಪಕ್ಷ ನಾಯಕರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದ ಎರಡೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.
ಆರ್ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರ ವಿರುದ್ಧದ ಪ್ರಕರಣಗಳಲ್ಲಿ ಸಿಬಿಐ ಸ್ವತಂತ್ರ ಸಂಸ್ಥೆಯಾಗಿ ತನ್ನ ಕೆಲಸವನ್ನು ಮಾಡುತ್ತಿದೆ ಎಂದು ಬಿಹಾರದ ಬಿಜೆಪಿ ನಾಯಕರು ಪ್ರತಿಪಾದಿಸಿದ್ದಾರೆ.







