ಹೈನುಗಾರಿಕೆಯನ್ನು ತ್ಯಜಿಸುವ ಪ್ರವೃತ್ತಿಯಲ್ಲಿ ಹೆಚ್ಚಳ: ಬೆಂಗಳೂರಲ್ಲಿ ಹಾಲಿನ ಕೊರತೆ

ಬೆಂಗಳೂರು, ಮಾ.7: ರೈತರು ಹೈನುಗಾರಿಕೆಯನ್ನು ತ್ಯಜಿಸುವ ಪ್ರವೃತ್ತಿ ಹೆಚ್ಚಾಗುತ್ತಿರುವುದರಿಂದ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಲು ಉತ್ಪಾದನೆ ಪ್ರಮಾಣ ಗಣನೀಯವಾಗಿ ಕುಸಿತವಾಗಿದೆ. ಇದರ ಜೊತೆಗೆ ಬೆಂಗಳೂರು ಹಾಲು ಒಕ್ಕೂಟ ನಿಯಮಿತದಲ್ಲಿ ಸರ್ವರ್ ಕೈ ಕೊಟ್ಟಿರುವುದರಿಂದ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಹಾಲು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಹಾಲಿನ ಉತ್ಪಾದನೆ ದಿನಕ್ಕೆ 14 ರಿಂದ 15 ಲಕ್ಷ ಲೀಟರ್ ನಿಂದ 12 ರಿಂದ 13 ಲಕ್ಷದವರೆಗೆ ಇಳಿಕೆಯಾಗಿದೆ. ಈ ಪರಿಸ್ಥಿತಿ ಇನ್ನು ಒಂದೆರೆಡು ತಿಂಗಳು ಮುಂದುವರೆಯುವ ಆತಂಕ ಎದುರಾಗಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಸಕಾಲಕ್ಕೆ ಹಾಲು ಸರಬರಾಜು ಆಗುವುದು ಕಷ್ಟವಾಗಲಿದೆ.
ಹೈನುಗಾರಿಕೆಯಲ್ಲಿ ರೈತರು ಆಸಕ್ತಿ ಕಳೆದುಕೊಂಡ ಹಿನ್ನೆಲೆಯಲ್ಲಿ ಉತ್ಪಾದನೆ ಕುಸಿತಗೊಳ್ಳಲು ಪ್ರಮುಖ ಕಾರಣವಾಗಿದೆ. ಬಮೂಲ್ ಅಂದಾಜು ಮಾಡಿರುವ ಪ್ರಕಾರ ಬೆಂಗಳೂರಿನಲ್ಲಿ 2500 ರಿಂದ 3000 ಜಾನುವಾರುಗಳನ್ನು ಪ್ರತಿ ತಿಂಗಳು ಹೈನುಗಾರಿಕೆ ಲಾಭದಾಯಕವಾಗಿರುವ ಇತರ ರಾಜ್ಯಗಳ ರೈತರಿಗೆ ಮಾರಾಟ ಮಾಡುತ್ತಿರುವುದು ಹಾಲು ಉತ್ಪಾದನೆ ಕುಂಠಿತವಾಗಲು ಪ್ರಮುಖ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. ಪರಿಸ್ಥಿತಿ ಕಳವಳಕಾರಿಯಾಗಿದ್ದು, ರೈತರ ಮನವೊಲಿಸಲು ಅಧಿಕಾರಿಗಳು ವಿಫಲಗೊಂಡಿದ್ದಾರೆ.
ಪ್ರತಿ ಲೀಟರ್ ಹಾಲಿಗೆ ನೆರೆ ರಾಜ್ಯಗಳಲ್ಲಿ 40 ರೂ.ಗಳನ್ನು ನೀಡುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ 30 ರೂ. ಪಾವತಿ ಮಾಡಲಾಗುತ್ತಿದೆ. ಇದರಿಂದ, ವೆಚ್ಚವೂ ಹೆಚ್ಚಳವಾಗುತ್ತಿದೆ.
ಪ್ರತಿ ತಿಂಗಳು 15 ರಿಂದ 20 ರೈತರು ಹಾಲು ಮಾರಾಟ ಮಾಡುವುದನ್ನು ನಿಲ್ಲಿಸುತ್ತಿದ್ದಾರೆ ಎಂದು ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ವಿವರಿಸಿದರು. ಅಲ್ಲದೆ, ಹಾಲಿನ ಪ್ಯಾಕೆಟ್‍ಗಳು, ತುಪ್ಪ ಮತ್ತು ಇತರ ಉತ್ಪನ್ನಗಳ ಉತ್ಪಾದನೆಯನ್ನು ಕಡಿಮೆ ಮಾಡಿದೆ. 15 ಲಕ್ಷ ಲೀಟರ್ ಹಾಲಿನಲ್ಲಿ ನಗರದಾದ್ಯಂತ 11 ಲಕ್ಷ ಲೀಟರ್ ಹಾಲನ್ನು ಗ್ರಾಹಕರಿಗೆ ಪೂರೈಕೆ ಮಾಡಲಾಗುತ್ತಿದೆ. ಮತ್ತೊಂದೆಡೆ ಬಮೂಲ್‍ನಲ್ಲಿ ಸರ್ವರ್ ಕೈ ಕೊಟ್ಟು ತಾಂತ್ರಿಕ ಸಮಸ್ಯೆ ಎದುರಾಗಿದೆ. ಇದು ಇನ್ನು 2 ದಿನ ಮುಂದುವರೆಯುವ ಸಾಧ್ಯತೆ ಇದ್ದು, ಇಆರ್‍ಪಿ ಸಮಸ್ಯೆಯಿಂದಾಗಿ ಲಾರಿಗಳಿಗೆ ಸಿಸ್ಟಮ್‍ನ ಅನುಸಾರ ಡೇಟಾ ಲೋಡ್ ಮಾಡಲು ತೊಂದರೆಯಾಗುತ್ತಿದೆ. ಈ ತಾಂತ್ರಿಕ ದೋಷ ಸರಿಪಡಿಸಲು ಸಂಸ್ಥೆ ಹೈದಾರಾಬಾದ್ ತಜ್ಞರನ್ನು ಸಂಪರ್ಕಿಸಿದೆ. ಬುಧವಾರ ತಾಂತ್ರಿಕ ಸಮಸ್ಯೆ ಬಗೆಹರಿಯಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.