ಟೈಲರ್ ಗಳು ತಪ್ಪದೆ ಇ-ಶ್ರಮ್ ಕಾರ್ಡ್ ಮಾಡಿಸಿಕೊಳ್ಳಿ: ಶಾಸಕ ವೇದವ್ಯಾಸ ಕಾಮತ್
ಟೈಲರ್ ಗಳ ದಿನಾಚರಣೆ

ಮಂಗಳೂರು, ಮಾ.7: ಸಮಾಜಕ್ಕೆ ಪ್ರಾಮಾಣಿಕ ಸೇವೆಯನ್ನು ನೀಡುವಲ್ಲಿ ಟೈಲರ್ ಗಳು ಮೊದಲ ಸ್ಥಾನದಲ್ಲಿದ್ದಾರೆ. ಅರ್ಥಿಕವಾಗಿ ಹಲವಾರು ಸಮಸ್ಯೆಗಳಿದ್ದರೂ ಸಮಯಕ್ಕೆ ಸರಿಯಾಗಿ ಉತ್ತಮವಾದ ಸೇವೆಯನ್ನು ನೀಡುತ್ತಾರೆ ಎಂದು ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಅಭಿಪ್ರಾಯಪಟ್ಟರು.
ಅವರು ಮಂಗಳವಾರ ನಗರದ ಪುರಭವನದಲ್ಲಿ ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ (ರಿ)ನ ಬೆಳ್ಳಿ ಹಬ್ಬ ವರ್ಷಾರಂಭದ ಪ್ರಯುಕ್ತ ಟೈಲರ್ ಗಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ಟೈಲರ್ ಗಳ ಸಮಸ್ಯೆಗಳು ನನ್ನ ಗಮನಕ್ಕೆ ಬಂದಿದೆ ಅದನ್ನು ಪರಿಹರಿಸುವ ಜವಾಬ್ದಾರಿ ನಮ್ಮದು. ಜಿಲ್ಲೆಯಲ್ಲಿರುವ ಎಲ್ಲಾ ಟೇಲರ್ಸ್‌ಗಳು ತಪ್ಪದೇ ಇ-ಶ್ರಮ್ ಕಾರ್ಡ್ ಮಾಡಿಸಿಕೊಳ್ಳಬೇಕು. ಮುಂಬರುವ ದಿನದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳನ್ನು ಪಡೆಯುವಲ್ಲಿ ನಮ್ಮ ಜಿಲ್ಲೆ ಮೊದಲ ಸ್ಥಾನದಲ್ಲಿರಬೇಕು. ಟೈಲರ್ಸ್‌ಗಳ ವೃತ್ತಿಯಲ್ಲಿ ಹಲವಾರು ಸವಾಲುಗಳಿವೆ. ಅದನೆಲ್ಲ ಬದಿಗಿಟ್ಟು, ರಾತ್ರಿ ಹಗಲೆನ್ನದೇ ಸಮಾಜದ ನಾಗರಿಕರಿಗೆ ಉತ್ತಮವಾದ ಉಡುಪನ್ನು ಹೋಲಿದು ಕೊಡುವಲ್ಲಿ ಟೇಲರ್ಸ್‌ಗಳ ಪಾತ್ರ ದೊಡ್ಡದು ಅದಕ್ಕಾಗಿ ಅವರನ್ನು ತಾನು ಅಭಿನಂದಿ ಸುವುದಾಗಿ ಅವರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಸಕ ಭರತ್ ಶೆಟ್ಟಿ ಮಾತನಾಡಿ, ಟೈಲರಿಂಗ್ ವೃತ್ತಿಯೂ ಒಂದು ಕಲೆ. ಕಳೆದ ಒಂದು ವರ್ಷಗಳ ಹಿಂದೆ ಟೇಲರ್ಸ್‌ಗಳು ಕೊರೋನಾದಿಂದ ಅರ್ಥಿಕವಾಗಿ ಸಂಕಷ್ಟಕ್ಕೆ ಈಡಾಗಿದ್ದರು.ಈ ನಿಟ್ಟಿನಲ್ಲಿ ಅವರ ಎಲ್ಲಾ ಬೇಡಿಕೆಗಳನ್ನು ಹಾಗೂ ಅವರಿಗೆ ಸರಕಾರದಿಂದ ನೆರವು ಒದಗಿಸಲು ಮುಂದಿನ ವಿಧಾನ ಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಅವರು ಭರವಸೆ ನೀಡಿದರು.
ಟೈಲರ್ಸ್ ಎಸೋಸಿಯೇಶನ್‌ನ ಧ್ವಜಾರೋಹಣವನ್ನು ಕೆ.ಎಸ್.ಟಿ.ಎ ರಾಜ್ಯ ಸಮಿತಿಯ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ವಸಂತ ಬಿ. ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕೆ.ಎಸ್.ಟಿ.ಎ ರಾಜ್ಯ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಕೆ.ಎಸ್.ಆನಂದ್ ಪ್ರಾಸ್ತವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ 8 ವಿಧಾನ ಸಭಾ ಕ್ಷೇತ್ರದ ಟೇಲರಿಂಗ್ ವೃತ್ತಿಯಲ್ಲಿ ಹಿರಿಯರಾದ ಉಮಾವತಿ ಮಂಗಳೂರು, ಕೆ.ಎಸ್ ಆನಂದ್ ಉಳ್ಳಾಲ್, ಶಂಬು ಬಲ್ಯಾಯ ಪುತ್ತೂರು, ಆನಂದ ಸಪಲ್ಯ ಬಂಟ್ವಾಳ, ಆಶಾ ಬಿ.ರೈ ಸುಳ್ಯ, ವೆಂಕಟೇಶ್ ಶೆಟ್ಟಿಗಾರ್ ಮುಲ್ಕಿ ಮೂಡಬಿದ್ರೆ, ಜಯಶ್ರೀ ಕಾಂಚನ ಸುರತ್ಕಲ್ ಹಾಗೂ ನಿತ್ಯನಂದ ಹೆಗ್ಡೆ ಬೆಳ್ತಂಗಡಿ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಶಾಸಕ ವೇದವ್ಯಾಸ್ ಕಾಮತ್ ಮಂಗಳೂರು ವಿಧಾನ ಸಭಾ ಶಾಸಕರ ಮೂಲಕ ಅರ್ಥಿಕವಾಗಿ ಹಿಂದುಳಿದ 27 ಮಂದಿಗೆ ಅರ್ಥಿಕ ಸಹಾಯ ಧನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ 9ಜನರಿಗೆ ಹೊಲಿಗೆ ಯಂತ್ರವನ್ನು ಹಸ್ತಾಂತರಿಸಿದರು.
ಕೆ.ಎಸ್.ಟಿ.ಎ ಜಿಲ್ಲಾ ಸಮಿತಿಯ ಅಧ್ಯಕ್ಷ ಜಯಂತ ಉರ್ಲಾಂಡಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕೆ.ಎಸ್.ಟಿ.ಎ ರಾಜ್ಯ ಸಮಿತಿಯ ಅಧ್ಯಕ್ಷ ನಾರಾಯಣ ಬಿ.ಎ, ಕೆ.ಎಸ್.ಟಿ.ಎ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕುಮಾರ್, ಕೆ.ಎಸ್.ಟಿ.ಎ ರಾಜ್ಯ ಸಮಿತಿಯ ಕೋಶಾಧಿಕಾರಿ ರಾಮಚಂದ್ರ ಉಡುಪಿ, ಕೆ.ಎಸ್.ಟಿ.ಎ ರಾಜ್ಯ ಸಮಿತಿಯ ಉಪಾಧ್ಯಕ್ಷ ಸುರೇಶ್ ಸಾಲಿಯಾನ್, ಮಂಗಳೂರು ಸಾಮರಸ್ಯದ ಅಧ್ಯಕ್ಷೆ ಮಂಜುಳಾ ನಾಯಕ್, ಕೆ.ಎಸ್.ಟಿ.ಎ ಜಿಲ್ಲಾ ಸಮಿತಿಯ ಉಾಧ್ಯಕ್ಷರಾದ ಕೇಶವ ಕೆ, ಚಕ್ರೇಶ್ ಅಮೀನ್, ಸುಜಾತ ಭಂಡಾರಿ, ಕೆ.ಎಸ್.ಟಿ.ಎ ಮಂಗಳೂರು ಕ್ಷೇತ್ರ ಸಮಿತಿಯ ವಿದ್ಯಾ ಶೆಟ್ಟಿ, ಮಂಗಳೂರು ಉಪ ಮೇಯರ್ ಪೂರ್ಣಿಮಾ, ವಿಭಾಗ-1 ಕಾರ್ಮಿಕ ಅಧಿಕಾರಿ ಕಾವೇರಿ ಟಿ, ವಿಭಾಗ-2 ಕಾರ್ಮಿಕ ಅಧಿಕಾರಿ ವಿಲ್ಮಾ ತಾವ್ರೋ, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ಪ್ರವೀಣ್ ಆಳ್ವ, ಜಿಲ್ಲಾ ಮಹಿಳಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರೂಪಾ ಡಿ.ಬಂಗೇರ ಹಾಗೂ ಜಿಲ್ಲಾ ಮಹಿಳಾ ಬಿಜೆಪಿ ಮೋರ್ಚಾದ ಅಧ್ಯಕ್ಷೆ ಪೂರ್ಣಿಮಾ ರಾವ್ ಉಪಸ್ಥಿತರಿದ್ದರು.