ಸಮಾಜದ ಹಿತಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಬಳಕೆಯಾಗಲಿ: ನ್ಯಾ. ಬಿ.ವಿ.ನಾಗರತ್ನ

ಬೆಂಗಳೂರು, ಮಾ.7: ಕೋರ್ಟ್‍ಗಳಿಗೆ ಸಲ್ಲಿಸುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಗಳು ಸಮಾಜದ ಹಿತವನ್ನು ಬಯಸಬೇಕು. ವೈಯಕ್ತಿಕ ಹಿತಾಸಕ್ತಿಗೆ ಬಳಕೆ ಆಗಬಾರದು ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಅಭಿಪ್ರಾಯಪಟ್ಟಿದ್ದಾರೆ.
ಪಿಇಎಸ್ ವಿಶ್ವವಿದ್ಯಾಲಯದ ಡಾ.ಎಂ.ಆರ್.ದೊರೆಸ್ವಾಮಿ ಸಿಲ್ವರ್ ಜ್ಯುಬಿಲಿ ಕಾಂಪ್ಲೆಕ್ಸ್‍ನಲ್ಲಿ ಆಯೋಜಿಸಿದ್ದ ಕಾನೂನು ಶೃಂಗಸಭೆಯನ್ನು ಉದ್ಘಾಟಿಸಿ ‘ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಉತ್ತಮ ಆಡಳಿತಕ್ಕೆ ವರವೋ ಅಥವಾ ಶಾಪವೋ’ ವಿಷಯದ ಕುರಿತು ಅವರು ಮಾತನಾಡಿದರು.
ಉತ್ತಮ ಆಡಳಿತ ಜಾರಿಗೆ ಪಿಐಎಲ್ ಉತ್ತಮ ಸಾಧನವಾಗಿದೆ. ಸಮಾಜದ ಹಿತ ಬಯಸಲು ಪಿಐಎಲ್‍ಗಳು ಸಲ್ಲಿಕೆಯಾಗಬೇಕು. ವೈಯಕ್ತಿಕ ಅಥವಾ ಯಾರದೋ ಲಾಭಕ್ಕೆ ಬಳಕೆ ಆಗಬಾರದು ಎಂದು ಕರೆ ನೀಡಿದರು.
ಪಿಐಎಲ್ ಮತ್ತು ಆರ್‍ಟಿಐಗಳು ಸಮಾಜಕ್ಕೆ ಉತ್ತಮ ಅಸ್ತ್ರಗಳಾಗಿವೆ. ಇವು ಉತ್ತಮ ಆಡಳಿತಕ್ಕೂ ಸಹಕಾರಿಯಾಗಿದೆ. ಜನಪ್ರತಿನಿಧಿಗಳು ಆಡಳಿತದಲ್ಲಿ ಜನ ಸಾಮಾನ್ಯರಿಗೆ ಹೊಣೆಗಾರರಾಗಿ ಇರಬೇಕು ಎಂಬುದನ್ನು ಆರ್‍ಟಿಐ ಮತ್ತು ಪಿಐಎಲ್ ಸೂಚಿಸುತ್ತವೆ ಎಂದು ತಿಳಿಸಿದರು.
ಪಿಇಎಸ್ ವಿವಿ ಕುಲಾಧಿಪತಿ ಡಾ.ಎಂ.ಆರ್.ದೊರೆಸ್ವಾಮಿ, ಸಹಕುಲಾಧಿಪತಿ ಪ್ರೊ.ಡಿ.ಜವಹರ್, ರಿಜಿಸ್ಟ್ರಾರ್ ಡಾ.ಕೆ.ಎಸ್.ಶ್ರೀಧರ್, ನಿರ್ವಹಣಾ ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಹರಿದಾಸ್ ಉಪಸ್ಥಿತರಿದ್ದರು.