ಮಾಡಾಳ್ ಜಾಮೀನು ಅರ್ಜಿ ತಕ್ಷಣ ವಿಚಾರಣೆಗೆ: ವಕೀಲರ ಸಂಘ ಖಂಡನೆ, ಸಿಜೆಐಗೆ ಪತ್ರ
ಬೆಂಗಳೂರು, ಮಾ.7: ಲಂಚ ಪ್ರಕರಣದ ಪ್ರಮುಖ ಆರೋಪಿ ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಒಂದೇ ದಿನದಲ್ಲಿ ವಿಚಾರಣೆ ನಡೆಸಿ ಮಾನ್ಯ ಮಾಡಿರುವ ನ್ಯಾಯಾಂಗ ಪ್ರಕ್ರಿಯೆಗೆ ಬೆಂಗಳೂರು ವಕೀಲರ ಸಂಘ(ಎಎಬಿ) ತೀವ್ರ ಕಳವಳ ವ್ಯಕ್ತಪಡಿಸಿದೆ.
ಈ ಕುರಿತಂತೆ ಮಂಗಳವಾರ ತುರ್ತು ಸಭೆ ನಡೆಸಿದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ.ಜಿ.ರವಿ ಮತ್ತು ಖಜಾಂಚಿ ಎಂ.ಟಿ.ಹರೀಶ್, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರವೊಂದನ್ನು ಬರೆದಿದ್ದು, ಮಾ.7ರಂದು ನ್ಯಾ.ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ನಡೆಸಿರುವ ಪ್ರಕ್ರಿಯೆ ನ್ಯಾಯಾಂಗದ ಬಗ್ಗೆ ಶ್ರೀಸಾಮಾನ್ಯರಿಗಿರುವ ನಂಬಿಕೆಯನ್ನು ಹುಸಿ ಮಾಡಿದೆ ಎಂದು ತಿಳಿಸಿದೆ.
ಹೈಕೋರ್ಟ್‍ನ ಸಾಮಾನ್ಯ ಪ್ರಕ್ರಿಯೆಯ ಅನುಸಾರ ಹೊಸ ಪ್ರಕರಣಗಳು ಅದರಲ್ಲೂ ನಿರೀಕ್ಷಣಾ ಜಾಮೀನು ಕೋರಿಕೆಯ ಅರ್ಜಿಗಳು ದಾಖಲಾದರೆ ಅವು ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಲು ಒಂದು ವಾರ ಸಮಯ ತೆಗೆದುಕೊಳ್ಳುತ್ತವೆ. ಆದರೆ, ಜನಪ್ರತಿನಿಧಿಗಳ ಹಾಗೂ ದೊಡ್ಡವರ ಪ್ರಕರಣಗಳನ್ನು ಮಾತ್ರ ಒಂದೇ ದಿನದೊಳಗೆ ಮಾನ್ಯ ಮಾಡಲಾಗುತ್ತಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಮಂಗಳವಾರ ಶಾಸಕ ವಿರೂಪಾಕ್ಷಪ್ಪ ಅವರ ಅರ್ಜಿ ವಿಚಾರಣೆಯಲ್ಲಿ ಕೈಗೊಂಡ ನಿಲುವನ್ನೇ ಶ್ರೀಸಾಮಾನ್ಯರ ವಿಷಯದಲ್ಲೂ ಅನುಸರಿಸುವಂತಾಗಬೇಕು. ಅದಕ್ಕಾಗಿ ಸದ್ಯ ಹೈಕೋರ್ಟ್‍ನಲ್ಲಿ ವಿಚಾರಣೆಗೆ ಬಾಕಿ ಇರುವ ಎಲ್ಲ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಒಂದೇ ದಿನದಲ್ಲಿ ನ್ಯಾಯಪೀಠದ ಎದುರು ವಿಚಾರಣೆಗೆ ನಿಗದಿಯಾಗುವಂತೆ ಪೋಸ್ಟ್ ಮಾಡಲು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ರಿಜಿಸ್ಟ್ರಾರ್ ಕಚೇರಿಗೆ ನಿರ್ದೇಶಿಸುವಂತಾಗಬೇಕು ಎಂದು ಸಂಘವು ಮನವಿ ಮಾಡಿದೆ.
ನ್ಯಾಯಾಲಯವು ಎಲ್ಲರಿಗೂ ಸಮಾನವಾಗಿರಬೇಕು. ಉಳ್ಳವರ ಪ್ರಕರಣಗಳನ್ನು ತೀರ್ಮಾನಿಸುವಂತೆಯೇ ಬಡಬೋರೇಗೌಡನ ಅರ್ಜಿಯನ್ನೂ ಪುರಸ್ಕರಿಸುವಂತಾಗಬೇಕು ಎಂದು ಸಂಘವು ಕೋರಿದೆ.