ಫ್ರಾನ್ಸ್: ಪರಿಷ್ಕೃತ ಪಿಂಚಣಿ ಯೋಜನೆ ವಿರೋಧಿಸಿ ಬೃಹತ್ ಪ್ರತಿಭಟನೆ; ರೈಲು ಸಂಚಾರ ಸ್ಥಗಿತ

ಪ್ಯಾರಿಸ್, ಮಾ.7: ಫ್ರಾನ್ಸ್ ನಲ್ಲಿ ಪರಿಷ್ಕೃತ ಪಿಂಚಣಿ ಯೋಜನೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಮಂಗಳವಾರ 6ನೇ ದಿನಕ್ಕೆ ಕಾಲಿರಿಸಿದ್ದು ವಿವಿಧೆಡೆ ರಸ್ತೆ ತಡೆ, ಜಾಥಾ ನಡೆಸಲಾಗಿದೆ. ರೈಲು ಸಂಚಾರ ಸ್ಥಗಿತಗೊಂಡಿರುವುದರಿಂದ ತೈಲ ಪೂರೈಕೆಗೆ ಅಡ್ಡಿಯಾಗಿದೆ. ದೇಶದಾದ್ಯಂತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ವರದಿಯಾಗಿದೆ.
ಮಾರ್ಚ್ ಅಂತ್ಯದೊಳಗೆ ಪರಿಷ್ಕೃತ ಪಿಂಚಣಿ ಯೋಜನೆಗೆ ಸಂಸತ್ತಿನ ಅನುಮೋದನೆ ಪಡೆಯಬಹುದು ಎಂದು ಸರಕಾರ ನಿರೀಕ್ಷಿಸುತ್ತಿದೆ. ಪೆನ್ಷನ್ ವಯಸ್ಸನ್ನು 2 ವರ್ಷ ಏರಿಕೆ ಮಾಡಿ 64ಕ್ಕೆ ನಿಗದಿಗೊಳಿಸುವ ಸರಕಾರದ ಪ್ರಸ್ತಾವವನ್ನು ಬೆಂಬಲಿಸದಂತೆ ಸಂಸದರ ಮೇಲೆ ಒತ್ತಡ ಹೇರಲು ನಿರಂತರ ಪ್ರತಿಭಟನೆ ನಡೆಯಲಿದೆ. ನಿರ್ಧಾರ ಹಿಂಪಡೆಯುವ ತನಕ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಕಾರ್ಮಿಕ ಯೂನಿಯನ್ ಮುಖ್ಯಸ್ಥ ಫ್ರೆಡೆರಿಕ್ ಸೊವಿಲಾಟ್‍ರನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ತ್ಯಾಜ್ಯ ಸಂಗ್ರಾಹಕರು ಹಾಗೂ ಟ್ರಕ್ ಚಾಲಕರೂ ಮುಷ್ಕರಕ್ಕೆ ಕೈಜೋಡಿಸಿದ್ದು ಇನ್ನಿತರ ಕ್ಷೇತ್ರಕ್ಕೂ ಪ್ರತಿಭಟನೆ ವಿಸ್ತರಿಸುವ ಸಾಧ್ಯತೆಯಿದೆ. ಹಲವೆಡೆ ಶಿಕ್ಷಕರೂ ಪ್ರತಿಭಟನೆ ಆರಂಭಿಸಿದ್ದರಿಂದ ಶಾಲೆಗೆ ರಜೆ ಘೋಷಣೆ ಅನಿವಾರ್ಯವಾಗಿದೆ. ಪ್ರತಿಭಟನೆಯಿಂದಾಗಿ ವಿದ್ಯುತ್ ಉತ್ಪಾದನೆ ಕುಂಠಿತವಾಗಿ, ತೈಲ ಪೂರೈಕೆ ಮತ್ತು ಸಂಸ್ಕರಣೆ ಕಾರ್ಯಕ್ಕೆ ಅಡ್ಡಿಯಾಗಿದೆ. ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿದ್ದರಿಂದ ಉತ್ತರ ಫ್ರಾನ್ಸ್ ನ ಅಮೀಯನ್ಸ್ ನಗರದಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು ಜನರು ರಸ್ತೆ ಪಕ್ಕ ವಾಹನ ನಿಲ್ಲಿಸಿ ಕಾಲ್ನಡಿಗೆಯಲ್ಲೇ ಸಾಗಬೇಕಾಯಿತು. ಬಹುತೇಕ ಇಂಟರ್‍ಸಿಟಿ ರೈಲುಗಳ ಸಂಚಾರ ಸ್ಥಗಿತಗೊಂಡಿದ್ದು ಮೆಟ್ರೋ ಸೇವೆಗೂ ತಡೆಯಾಗಿದೆ. ಈ ಹಿಂದೆ ಜನವರಿ 31ರಂದು ನಡೆದಿದ್ದ ರಾಷ್ಟ್ರವ್ಯಾಪಿ ಪ್ರತಿಭಟನೆಯಲ್ಲಿ 1.27 ದಶಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.
ಈ ಮಧ್ಯೆ, ಪಿಂಚಣಿ ಯೋಜನೆ ಪರಿಷ್ಕರಣೆ ಕುರಿತು ನಡೆಸಿದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಪಾಲ್ಗೊಂಡಿದ್ದ ಹೆಚ್ಚಿನವರು ಪರಿಷ್ಕರಣೆಗೆ ವಿರೋಧ ಸೂಚಿಸಿದ್ದಾರೆ ಎಂದು ಸ್ಥಳೀಯ ಟಿವಿ ವಾಹಿನಿಗಳು ವರದಿ ಮಾಡಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಫ್ರಾನ್ಸ್ ಪ್ರಧಾನಿ ಎಲಿಜಬೆತ್ ಬೋರ್ನ್ `ಹೆಚ್ಚಿನ ಜನತೆ ಪಿಂಚಣಿಗೆ ಅರ್ಹರಾಗಲು ಮತ್ತೆರಡು ವರ್ಷ ಕೆಲಸ ಮಾಡಲು ವಿರೋಧಿಸುತ್ತಿರುವುದನ್ನು ಗಮನಿಸಿದ್ದೇನೆ. ಆದರೆ ವ್ಯವಸ್ಥೆಯ ಕಾರ್ಯಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಲು ಇದು ಅಗತ್ಯವಾಗಿದೆ' ಎಂದಿದ್ದಾರೆ.
ಸಂಸತ್ತಿನಲ್ಲಿ ಪಿಂಚಣಿ ಪರಿಷ್ಕರಣೆ ಮಸೂದೆಗೆ ಅನುಮೋದನೆ ಪಡೆಯುವಷ್ಟು ಬಹುಮತವನ್ನು ಇಮ್ಯಾನುವೆಲ್ ಮಾಕ್ರನ್ ಪಕ್ಷ ಹೊಂದಿಲ್ಲ. ಆದರೆ ಅವರಿಗೆ ಕನ್ಸರ್ವೇಟಿವ್ ಪಕ್ಷದ ಕೆಲ ಸಂಸದರ ಬೆಂಬಲವಿದೆ. ಮಾರ್ಚ್ ಅಂತ್ಯದೊಳಗೆ ಸಂಸತ್ತಿನ ಮೂಲಕ ಅನುಮೋದನೆ ಪಡೆಯಲು ಸಾಧ್ಯವಾಗದಿದ್ದರೆ, ವಿಶೇಷ ಸಾಂವಿಧಾನಿಕ ಅಧಿಕಾರ ಬಳಸಿ ಮಸೂದೆಗೆ ಅನುಮೋದನೆ ಗಳಿಸುವ ಅವಕಾಶವಿದೆ.